ಉಡುಪಿ: 24 ಮನೆಗಳಿಗೆ ಹಾನಿ; 8 ಲಕ್ಷಕ್ಕೂ ಅಧಿಕ ನಷ್ಟ
ಉಡುಪಿ: ಕಳೆದೆರಡು ದಿನಗಳ ಗಾಳಿ-ಮಳೆಯಿಂದ ಉಡುಪಿ ಜಿಲ್ಲೆಯಲ್ಲಿ ೨೪ರಷ್ಟು ಮನೆ, ದನದ ಕೊಟ್ಟಿಗೆ, ಶೌಚಾಲಯದ ಗೋಡೆಗಳಿಗೆ ಹಾನಿಯಾಗಿದ್ದು, ಎಂಟು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಎಂಟು ಮನೆಗಳಿಗೆ ಹಾನಿಯಾಗಿ ೧.೫೦ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿ ದ್ದರೆ, ಉಡುಪಿ ತಾಲೂಕಿನಲ್ಲಿ ಮೂರು ಮನೆಗಳಿಗೆ ಎರಡು ಲಕ್ಷ ರೂ.ಗಳಿಗೂ ಅಧಿಕ ಹಾನಿಯಾಗಿದೆ. ಇನ್ನು ಕಾರ್ಕಳದಲ್ಲಿ ಮೂರು ಮನೆಗಳಿಗೆ ೧.೨೫ ಲಕ್ಷ ರೂ., ಕಾಪುವಿನಲ್ಲಿ ಐದು ಮನೆಗಳಿಗೆ ಸುಮಾರು ಎರಡು ಲಕ್ಷ ರೂ. ಹಾಗೂ ಬೈಂದೂರಿನಲ್ಲಿ ಐದು ಮನೆಗಳಿಗೆ ೧.೨೦ ಲಕ್ಷ ರೂ.ನಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕಿನ ಶಿರ್ವದ ಮುರ್ಗೇಶ ಎಂಬವರ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಯಾಗಿದೆ. ಮೂಡಬೆಟ್ಟು ಗ್ರಾಮದ ಮೇರಿ ಮೆಂಡೋನ್ಸಾ ಎಂಬವರ ಮನೆಗೆ ಭಾಗಶ: ಹಾನಿಯಾಗಿ ೬೦ಸಾವಿರ, ಸುಧಾಕರ ಆಚಾರ್ಯರ ಮನೆಗೆ ೧೫ಸಾವಿರ ರೂ., ಯೇಣಗುಡ್ಡೆಯ ಸಾವಿತ್ರಿ ಆಚಾರ್ಯರ ಮನೆಗೆ ೨೫ ಸಾವಿರ ರೂ.ನಷ್ಟವಾಗಿದೆ.
ಕಾರ್ಕಳ ಕಸಬಾದ ಸುರೇಂದ್ರ ಶೆಟ್ಟಿ ಎಂಬವರ ಮನೆ ಸಂಪೂರ್ಣ ಹಾನಿ ಗೊಂಡಿದ್ದು ೫೦ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ. ಸಾಣೂರಿನ ಶೀನ ಹರಿಜನ ಅವರ ಮನೆಯ ಗೋಡೆ ಭಾಗಶ: ಕುಸಿದು ೫೦ ಸಾವಿರ ರೂ. ಕುಕ್ಕುಂದೂರು ಉದಯ ಆಚಾರ್ಯರ ಮನೆಗೆ ೨೫ ಸಾವಿರ ರೂ.ನಷ್ಟವಾಗಿದೆ.
ಉಡುಪಿ ಅಲೆವೂರಿನ ಲಕ್ಷ್ಮೀ ಪೂಜಾರ್ತಿ ಎಂಬವರ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು ೯೨,೦೦೦ರೂ., ಕೊರಂಗ್ರಪಾಡಿಯ ಶಶಿ ಎಂಬವರ ಮನೆಗೆ ೫೦ಸಾವಿರ ಹಾಗೂ ಸಿರಿಲ್ ಪ್ರಕಾಶ್ ಎಂಬವರ ಮನೆಗೆ ೬೦ ಸಾವಿರ ರೂ.ಗಳಷ್ಟು ನಷ್ಟವಾಗಿದೆ.
ಬ್ರಹ್ಮಾವರ ತಾಲೂಕಿನ ಉಪ್ಪೂರಿನ ಪೌಸ್ತಿನ್ ಮಸ್ಕರೇನಸ್ ಮನೆ ಗೋಡೆ ಕುಸಿದು ೪೦ ಸಾವಿರ, ಬೈಕಾಡಿಯ ನರಸಿಂಹ ಪೂಜಾರಿಯವರ ಮನೆಯ ಗೋಡೆ ಕುಸಿದು ೨೦ ಸಾವಿರ, ಕಾರ್ಕಡದ ಶೀನ ಪೂಜಾರಿ ಎಂಬವರ ಮನೆಗೆ ೨೫ ಸಾವಿರ ರೂ., ಕಾಳಿ ಪೂಜಾರ್ತಿ ಮನೆಗೆ ೨೫ ಸಾವಿರ, ಮಣೂರಿನ ವಿನೋದ ಹಾಗೂ ೩೮ ಕಳ್ತೂರಿನ ಆನಂದ ಪೂಜಾರಿ ಮನೆಗೆ ೩೦ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.







