ಶ್ರೀಲಂಕಾದಲ್ಲಿ ಹೊಸ ಸರಕಾರವನ್ನು ಮುನ್ನಡೆಸಲು ಸಿದ್ಧ: ಎಸ್‌ಜೆಬಿ ಪಕ್ಷ ಘೋಷಣೆ

ಕೊಲಂಬೊ, ಜು.11: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದೇಶಕ್ಕೆ ಸ್ಥಿರತೆ ತರುವ ನಿಟ್ಟಿನಲ್ಲಿ ಮುಂದಿನ ಸರಕಾರದ ನೇತೃತ್ವವನ್ನು ವಹಿಸಲು ಸಿದ್ಧವಿರುವುದಾಗಿ ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷ ಸಮಗಿ ಜನ ಬಲವೆಗಯ (ಎಸ್ಜೆಬಿ) ಪಕ್ಷ ಸೋಮವಾರ ಘೋಷಿಸಿದ್ದು, ಈ ಕುರಿತು ಸಂಸತ್ನಲ್ಲಿ ನಡೆಯುವ ಪ್ರಕ್ರಿಯೆಗೆ ಪ್ರತಿರೋಧವನ್ನು ದೇಶದ್ರೋಹೀ ಕೃತ್ಯ ಎಂದು ಪರಿಗಣಿಸಲಾಗುವುದು ಎಂದಿದೆ.
ಸರ್ವಪಕ್ಷಗಳ ಮಧ್ಯಂತರ ಸರಕಾರ ರಚನೆಯಾದರೆ ತಾವು ಸಚಿವ ಸಂಪುಟದೊಂದಿಗೆ ರಾಜೀನಾಮೆಗೆ ಸಿದ್ಧ ಎಂದು ಪ್ರಧಾನಿ ರಣಿಲ್ ವಿಕ್ರಮಸಿಂಘೆ ಘೋಷಿಸಿದ ಬೆನ್ನಲ್ಲೇ ಎಸ್ಜೆಬಿ ಪಕ್ಷದ ಮುಖಂಡ ಸಜಿತ್ ಪ್ರೇಮದಾಸ ಈ ಹೇಳಿಕೆ ನೀಡಿದ್ದಾರೆ. ಜುಲೈ 13ರಂದು ರಾಜೀನಾಮೆ ನೀಡುವುದಾಗಿ ರಾಜಪಕ್ಸ ಘೋಷಿಸಿದ್ದರೆ, ಹೊಸ ಸರಕಾರ ರಚನೆಯಾದೊಡನೆ ರಾಜೀನಾಮೆ ನೀಡುವುದಾಗಿ ವಿಕ್ರಮಸಿಂಘೆ ಕೂಡಾ ಘೋಷಿಸಿರುವ ಹಿನ್ನೆಲೆಯಲ್ಲಿ ರವಿವಾರ ಸಭೆ ನಡೆಸಿದ ವಿಪಕ್ಷಗಳು ಸರ್ವಪಕ್ಷಗಳ ಮಧ್ಯಂತರ ಸರಕಾರ ರಚನೆಗೆ ನಿರ್ಧರಿಸಿವೆ.
ಅಧ್ಯಕ್ಷರು ಮತ್ತು ಪ್ರಧಾನಿಯ ಹಂತದಲ್ಲಿ ನಮ್ಮ ಪಕ್ಷ ದೇಶವನ್ನು ಅಭಿವೃದ್ಧಿಯ ದಿಕ್ಕಿನತ್ತ ಮುನ್ನಡೆಸಲು ಸಿದ್ಧವಾಗಿದೆ. ಬೇರೆ ಯಾವುದೇ ಪರ್ಯಾಯವಿಲ್ಲ. ಯಾರಾದರೂ ಇದನ್ನು ವಿರೋಧಿಸಿದರೆ ಅಥವಾ ಸಂಸತ್ತಿನಲ್ಲಿ ಅಡ್ಡಿಪಡಿಸಲು ಪ್ರಯತ್ನಿಸಿದರೆ ನಾವದನ್ನು ದೇಶದ್ರೋಹದ ಕೃತ್ಯ ಎಂದು ಪರಿಗಣಿಸುತ್ತೇವೆ. ತಾಯ್ನೋಡಿನ ರಕ್ಷಣೆಗೆ, ತಾಯ್ನೋಡಿಗೆ ನಾಯತಕ್ವ ಒದಗಿಸಲು, ಆರ್ಥಿಕತೆಯನ್ನು ನಿರ್ಮಿಸಲು ನಾವು ಸಿದ್ಧ ಎಂದು ಪ್ರೇಮದಾಸ ಹೇಳಿದ್ದಾರೆ.
ಗೊತಬಯ ರಾಜೀನಾಮೆಗೆ ಕಾರಣವಾಗಲಿರುವ ಪ್ರತಿಭಟನೆ ‘ ತಾಯ್ನಡಿನ ಗೆಲುವು, ಜನತೆಯ ಗೆಲುವು ಮತ್ತು ಹೋರಾಟದ ಗೆಲುವು’ ಎಂದವರು ಹೇಳಿದರು.
ಶ್ರೀಲಂಕಾದ ಸಂವಿಧಾನ ಪ್ರಕಾರ, ಅಧ್ಯಕ್ಷರು ಹಾಗೂ ಪ್ರಧಾನಿ ಇಬ್ಬರೂ ರಾಜೀನಾಮೆ ಸಲ್ಲಿಸಿದರೆ, ಸಂಸತ್ತಿನ ಸ್ಪೀಕರ್ ಹಂಗಾಮಿ ಅಧ್ಯಕ್ಷರಾಗಿ ಗರಿಷ್ಟ 30 ದಿನ ಕಾರ್ಯನಿರ್ವಹಿಸಬಹುದಾಗಿದೆ. 30 ದಿನದೊಳಗೆ ಸಂಸತ್ ಸದಸ್ಯರಲ್ಲಿ ಒಬ್ಬರನ್ನು ಸಂಸತ್ ಆಯ್ಕೆ ಮಾಡಬೇಕು. ಅಧ್ಯಕ್ಷರಾಗಿ ಆಯ್ಕೆಯಾದವರು ತಮ್ಮ ಸಚಿವ ಸಂಪುಟ ರಚಿಸಿ ಆಡಳಿತ ನಡೆಸಬಹುದು. ಶ್ರೀಲಂಕಾದ ಹಾಲಿ ಸಂಸತ್ನ ಅವಧಿ ಇನ್ನೂ ಎರಡು ವರ್ಷವಿದೆ.
ಸರ್ವಪಕ್ಷಗಳ ಸರಕಾರ ರಚನೆಯಾದರೆ ಸಚಿವ ಸಂಪುಟ ರಾಜೀನಾಮೆ: ಪ್ರಧಾನಿ
ಸರ್ವಪಕ್ಷಗಳ ಮಧ್ಯಂತರ ಸರಕಾರ ರಚನೆಯಾದರೆ, ಈಗಿನ ಸಚಿವ ಸಂಪುಟ ರಾಜೀನಾಮೆ ನೀಡಲಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಎಲ್ಲಾ ಸಚಿವರೂ ಸಹಮತ ಸೂಚಿಸಿದ್ದಾರೆ ಎಂದು ಶ್ರೀಲಂಕಾದ ಪ್ರಧಾನಿ ರಣಿಲ್ ವಿಕ್ರಮಸಿಂಘೆಯ ಕಚೇರಿಯ ಹೇಳಿಕೆ ತಿಳಿಸಿದೆ. ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಅಧ್ಯಕ್ಷ ಗೊತಬಯ ರಾಜಪಕ್ಸ ಶನಿವಾರ ಘೋಷಿಸಿದ್ದರು.
‘ಸೋಮವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಚಿವರೂ ಸರ್ವ ಪಕ್ಷಗಳ ಸರಕಾರ ರಚನೆಗೆ ಒಪ್ಪಂದ ಏರ್ಪಟ್ಟೊಡನೆ ರಾಜೀನಾಮೆ ಸಲ್ಲಿಸಲು ಒಪ್ಪಿಕೊಂಡಿದ್ದಾರೆ . ತಮ್ಮ ಜವಾಬ್ದಾರಿಯನ್ನು ಹೊಸ ಸರಕಾರಕ್ಕೆ ಹಸ್ತಾಂತರಿಸಲು ಅವರು ಸಿದ್ಧರಿದ್ದಾರೆ’ ಎಂದು ಹೇಳಿಕೆ ತಿಳಿಸಿದೆ. ಸರ್ವ ಪಕ್ಷಗಳ ಮಧ್ಯಂತರ ಸರಕಾರದ ವಿಷಯದ ಬಗ್ಗೆ ಸಂಸತ್ತಿನ ಸ್ಪೀಕರ್ ಜತೆ ಚರ್ಚಿಸುವುದಾಗಿ ಪ್ರಧಾನಿ ವಿಕ್ರಮಸಿಂಘೆ ಹೇಳಿದ್ದಾರೆ.