ತುಂಬಿ ಹರಿಯುತ್ತಿರುವ ಉಡುಪಿಯ ನದಿಗಳು!

ಉಡುಪಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದು, ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಶಾಂಭವಿ ನದಿಯು ಎಚ್ಚರಿಕೆ ಮಟ್ಟವನ್ನು ಮೀರಿ ಹರಿಯುತ್ತಿರುವ ಬಗ್ಗೆ ವರದಿಯಾಗಿದೆ.
ಸ್ವರ್ಣ ನದಿ ಪ್ರಸ್ತುತ ೨೧.೭೮ಮೀಟರ್(ಎಚ್ಚರಿಕೆ ಮಟ್ಟ-೨೦.೫ಮೀ., ಅಪಾಯ ಮಟ್ಟ-೨೩ಮೀ.), ಹಾಲಾಡಿ ನದಿ ೫.೨೩ಮೀ.(ಎಚ್ಚರಿಕೆ ಮಟ್ಟ- ೬.೫.ಮೀ., ಅಪಾಯ ಮಟ್ಟ- ೮ಮೀ.), ಶಾಂಭವಿ ನದಿ ೫೪.೪೬ಮೀ. (ಎಚ್ಚರಿಕೆ ಮಟ್ಟ- ೫೪.೩೬ಮೀ., ಅಪಾಯ ಮಟ್ಟ- ೫೫.೩೬ಮೀ.), ಸೀತಾ ನದಿ ೧೪.೧೨ ಮೀ.(ಎಚ್ಚರಿಕೆ ಮಟ್ಟ- ೧೪.೮೫ಮೀ., ಅಪಾಯ ಮಟ್ಟ-೧೮ಮೀ..) ಮಟ್ಟದಲ್ಲಿ ಹರಿಯುತ್ತಿದೆ.
ಮಳೆಯಿಂದ ಉಡುಪಿ ಜಿಲ್ಲೆಯಾದ್ಯಂತ ಕಳೆದ ಜು.೧ರಿಂದ ಒಟ್ಟು ಒಂದು ಜಾನುವಾರು ಮೃತಪಟ್ಟಿದ್ದು, ಎಂಟು ಮನೆಗಳು ಸಂಪೂರ್ಣ ಹಾಗೂ ೧೧೦ ಮನೆಗಳು ಭಾಗಶಃ ಹಾನಿಯಾಗಿವೆ. ಒಟ್ಟು ೧೦೩ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ೪೯ ಸೇತುವೆ, ೮೬೧ ಕಿ.ಮೀ. ರಸ್ತೆ, ಒಂದು ಶಾಲೆ ಹಾಗೂ ೧೦ ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿರುವ ಬಗ್ಗೆ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.





