ದ.ಕ.ಜಿಲ್ಲೆಯಲ್ಲಿ ಮಳೆ ಇಳಿಮುಖ; ಜೂ.12ರಿಂದ ಆರೆಂಜ್ ಅಲರ್ಟ್

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸೋಮವಾರ ಮಳೆ ಪ್ರಮಾಣದಲ್ಲಿ ಭಾರೀ ಇಳಿಮುಖವಾಗಿದೆ. ಆದರೂ ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಮಳೆಯಾಗಿದೆ. ಈ ಮಧ್ಯೆ ಸತತವಾಗಿ ಸುರಿದ ಮಳೆಯಿಂದ ಸೋಮ ವಾರ ಹಾನಿಯ ಪ್ರಮಾಣದಲ್ಲಿ ತುಸು ಏರಿಕೆ ಕಂಡು ಬಂದಿವೆ.
ಕರಾವಳಿಯಲ್ಲಿ ಈ ಹಿಂದೆ ಘೋಷಿಸಲಾಗಿದ್ದ ರೆಡ್ ಅಲರ್ಟ್ ಮಂಗಳವಾರದಿಂದ ಆರೆಂಜ್ ಅಲರ್ಟ್ ಆಗಿ ಪರಿವರ್ತನೆಗೊಂಡಿವೆ. ಆರೆಂಜ್ ಅಲರ್ಟ್ ಶನಿವಾರ ಮುಂಜಾನೆವರೆಗೂ ಮುಂದುವರಿಯಲಿದೆ. ಹಾಗಾಗಿ ಮಳೆ ಒಂದಷ್ಟು ತಗ್ಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ರವಿವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಸುಬ್ರಹ್ಮಣ್ಯದಲ್ಲಿ ಅತ್ಯಧಿಕ ೧೬ ಸೆಂ.ಮೀ. ಮಳೆಯಾಗಿದೆ. ಮೂಡುಬಿದಿರೆಯಲ್ಲಿ ೧೧, ಮಂಗಳೂರು ವಿಮಾನ ನಿಲ್ದಾಣ ಮತ್ತು ಬೆಳ್ತಂಗಡಿಯಲ್ಲಿ ತಲಾ ೯, ಪಣಂಬೂರು ಮತ್ತು ಸುಳ್ಯದಲ್ಲಿ ತಲಾ ೮, ಪುತ್ತೂರು ಮತ್ತು ಮಂಗಳೂರಿನಲ್ಲಿ ತಲಾ ೭, ಮಾಣಿ, ಧರ್ಮಸ್ಥಳದಲ್ಲಿ ತಲಾ ೬ ಸೆಂ.ಮೀ. ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಸೋಮವಾರ ಮಳೆ ಕಡಿಮೆ ಸುರಿದಿದ್ದರೂ ಕೂಡ ಸಮುದ್ರದಲ್ಲಿ ಬಲವಾದ ಗಾಳಿ ಬೀಸಿವೆ. ಪ್ರತಿ ಗಂಟೆಗೆ ೪೫-೫೫ ಕಿ.ಮೀ.ನಿಂದ ೬೫ ಕಿ.ಮೀ.ವರೆಗೆ ಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಸಮುದ್ರದ ಪ್ರಕ್ಷುಬ್ಧತೆಯೂ ಮುಂದುವರಿದಿದೆ. ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವುದರಿಂದ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮುಂದುವರಿದ ಮಳೆಹಾನಿ
ಜಿಲ್ಲೆಯಲ್ಲಿ ಸೋಮವಾರವೂ ಮಳೆ ಹಾನಿಯ ಪ್ರಮಾಣ ಹೆಚ್ಚಾಗಿವೆ. ಸೋಮವಾರ ೧೪ ಮನೆಗಳು ಸಂಪೂರ್ಣ ನೆಲಸಮವಾಗಿದೆ ಮತ್ತು ೩೩ ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಒಟ್ಟಾರೆ ಈವರೆಗೆ ೭೧ ಮನೆಗಳು ಸಂಪೂರ್ಣ ಮತ್ತು ೪೫೭ ಮನೆಗಳಿಗೆ ಭಾಗಶಃ ಹಾನಿಯಾಗಿವೆ.
ಜಿಲ್ಲೆಯಲ್ಲಿ ೯೧ ವಿದ್ಯುತ್ ಕಂಬಗಳು ಸೋಮವಾರ ಧರಾಶಾಹಿಯಾಗಿದೆ. ೮ ಟ್ರಾನ್ಸ್‌ಫಾರ್ಮರ್‌ಗಳು ಕೂಡ ನೆಲಸಮವಾಗಿದೆ. ಇದರಿಂದ ಈವರೆಗೆ ೩,೦೧೨ ವಿದ್ಯುತ್ ಕಂಬಗಳು ಮತ್ತು ೨೧೬ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟವಾಗಿದೆ.
ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ೨ ಕಾಳಜಿ ಕೇಂದ್ರ ತೆರೆಯಲಾಗಿದೆ. ಅದರಲ್ಲಿ ೬ ಮಂದಿ ಪುರುಷರು, ೪ ಮಂದಿ ಮಹಿಳೆಯರ ಸಹಿತ ೧೧ ಮಂದಿ ಆಶ್ರಯ ಪಡೆದಿದ್ದಾರೆ.
*ದ.ಕ.ಜಿಲ್ಲೆಯ ಮಳೆ ವಿವರ
*ಮಂಗಳೂರು: ೭೦.೧ ಮಿ.ಮೀ.
*ಬಂಟ್ವಾಳ: ೮೪.೬ ಮಿ.ಮೀ.
*ಪುತ್ತೂರು: ೮೪.೪ ಮಿ.ಮೀ.
*ಬೆಳ್ತಂಗಡಿ: ೭೫.೭ ಮಿ.ಮೀ
*ಸುಳ್ಯ: ೮೬.೭ ಮಿ.ಮೀ.
*ಮೂಡುಬಿದಿರೆ: ೧೦೭.೧ ಮಿ.ಮೀ
*ಕಡಬ: ೮೫.೫ ಮಿ.ಮೀ
(ಸರಾಸರಿ-೮೨.೪ ಮಿ.ಮೀ.)