ಮೂಳೂರು ಕಡಲ್ಕೊರೆತ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ಕಾಪು : ಕಡಲ್ಕೊರೆತ ಉಂಟಾದ ಮೂಳೂರಿನ ತೊಟ್ಟಂಗೆ ಸೋಮವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಮಾತನಾಡಿ, ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲು ಹೇಳಿದ್ದೇವೆ. ಸಮುದ್ರ ಮಾತ್ರವಲ್ಲದೆ ಬ್ಯಾಕ್ ವಾಟರ್ ಸಮಸ್ಯೆ ಯಿಂದಲೂ ಕಾಪು ತಾಲೂಕಿನಲ್ಲಿ ಹಲವಾರು ಕಡೆಗಳಲ್ಲಿ ನಷ್ಟ ಸಂಭವಿಸಿದೆ.
ಇದಕ್ಕೆ ಶಾಶ್ವತ ಪರಿಹಾರಗಳನ್ನು ಒದಗಿಸಲು ಮುಖ್ಯ ಮಂತ್ರಿ ಹಾಗೂ ಕಂದಾಯ ಸಚಿವ ರಲ್ಲಿ ತಿಳಿಸಲಾಗಿದೆ. ಹಂತ ಹಂತವಾಗಿ ಇದನ್ನು ಪೂರೈಕೆ ಮಾಡುವ ಭರವಸೆ ಕೂಡಾ ಕೊಟ್ಟಿದ್ದಾರೆ ಎಂದರು.
ಈ ವರ್ಷ ಈ ಭಾಗದಲ್ಲಿ ವಾಡಿಕೆ ಗಿಂತ ಎರಡು ಪಟ್ಟು ಹೆಚ್ಚು ಮಳೆ ಬಂದಿದೆ. ಕಾರಣ ಇಲ್ಲಿ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಸುಮಾರು ಆರೇಳು ಮನೆ ಪೂರ್ಣನಾಶ ವಾಗಿವೆ. ಮೂವತ್ತು ಮನೆಗಳು ಭಾಗಶಃ ನಾಶವಾಗಿದೆ. ಕಾಪು ಪರಿಸರದಲ್ಲಿ ಸಮುದ್ರ ಅಲೆಗಳು ತುಂಬಾ ಒಳಕ್ಕೆ ಬಂದಿದೆ. ಇದರಿಂದಾಗಿ ತಡೆಗೋಡೆ ಕಲ್ಲುಗಳು ಸಮುದ್ರದ ಪಾಲಾಗಿವೆ. ಇದರಿಂದ ಹಲವಾರು ತೋಟಗಳಿಗೆ ನೀರು ನುಗ್ಗಿ ತೆಂಗಿನ ಮರಗಳು ಸಮುದ್ರದ ಪಾಲಾಗಿವೆ. ಇದಕ್ಕೆ ಶಾಶ್ವತವಾದ ತಡೆಗೋಡೆ ಮಾಡುವುದೇ ಪರಿಹಾರ. ಸಿ.ಆರ್.ಝಡ್ ಮುಂತಾದ ಸಮಸ್ಯೆ ಗಳ ಕಾರಣ ಹಲವಾರು ಕೆಲಸ ಬಾಕಿ ಇವೆ ಎಂದು ನುಡಿದರು.
ಕೃಷಿ ಹಾನಿ ಬಗ್ಗೆಯೂ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಹಾನಿ ಬಗ್ಗೆ ಸರ್ವೆ ಆದ ಮೇಲೆ ಇದಕ್ಕೆ ಅವಶ್ಯಕ ವಾಗಿ ಪರಿಹಾರ ನೀಡುವ ಮೂಲಕ ಮತ್ತು ನೀರು ಗದ್ದೆಗಳಲ್ಲಿ ಇಳಿದು ಪುನಃ ಸಾಗುವಳಿಗೆ ಅನುಕೂಲವಾದ ವಾತಾವರಣ ಇದೆಯೇ ಎಂದು ಪರಿಶೀಲಿಸಿ ನಿರ್ಣಯ ಮಾಡಲು ತಿಳಿಸಿದ್ದೇವೆ ಎಂದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಕಾಪು ತಹಶಿಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಾಪು ಪುರಸಭಾಧಿಕಾರಿ ವೆಂಕಟೇಶ ನಾವಡ, ಸ್ಥಳೀಯರು ಉಪಸ್ಥಿತರಿದ್ದರು.