ಸಿಧು ಮೂಸೆ ವಾಲ ಹತ್ಯೆ ಪ್ರಕರಣ: ಪ್ರಕರಣದ ವರ್ಗಾವಣೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ
ಹೊಸದಿಲ್ಲಿ, ಜು. 11: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಕೋರಿ ಪಂಜಾಬ್‌ನ ಬಿಜೆಪಿ ನಾಯಕ ಜಗಜೀತ್ ಸಿಂಗ್ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಇಂತಹ ಪ್ರಕರಣಗಳಿಗೆ ಯಾವುದೇ ರಾಜಕೀಯ ಬಣ್ಣ ನೀಡಬಾರದು ಹಾಗೂ ಇಂತಹ ಅಭ್ಯಾಸವನ್ನು ಪ್ರಶಂಸಿಸಬಾರದು ಎಂದು ನ್ಯಾಯಮೂತಿಗಳಾದ ಅಜಯ್ ರಸ್ತೋಗಿ ಹಾಗೂ ಅಭಯ್ ಎಸ್. ಓಕಾ ಅವರನ್ನು ಒಳಗೊಂಡ ಪೀಠ ಹೇಳಿದೆ. ಅಲ್ಲದೆ, ನ್ಯಾಯಾಲಯ ಎಲ್ಲ ಜನರಿಗಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದೆ.
ಈ ನಡುವೆ ಪಂಜಾಬ್ ಪೊಲೀಸರಿಗೆ ನೀಡಿದ್ದ ಟ್ರಾನ್ಸಿಟ್ ಡಿಮಾಂಡ್ ಅನ್ನು ಪ್ರಶ್ನಿಸಿ ಆರೋಪಿ ಲಾರೆನ್ಸ್ ಬಿಷ್ಣೋಯಿಯ ತಂದೆ ಸಲ್ಲಿಸಿದ ಇನ್ನೊಂದು ಮನವಿಯ ವಿಚಾರಣೆಯನ್ನು ನ್ಯಾಯಾಲಯ ಜುಲೈ 18ಕ್ಕೆ ಮಂದೂಡಿದೆ. ಅಲ್ಲದೆ, ಮನವಿಯ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಪಂಜಾಬ್ ಸರಕಾರಕ್ಕೆ ಸೂಚಿಸಿದೆ.
ಸಿಧು ಮೂಸೆವಾಲ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿಯನ್ನು ಬಂಧಿಸಲು ಪಂಜಾಬ್ ಪೊಲೀಸರಿಗೆ ದಿಲ್ಲಿಯ ಪಾಟಿಯಾಲ ಹೌಸ್ ನ್ಯಾಯಾಲಯ ಜೂನ್ 14ರಂದು ಅನುಮತಿ ನೀಡಿತ್ತು. ಅಲ್ಲದೆ, ಪಂಜಾಬ್ ಪೊಲೀಸರ ಟ್ರಾನ್ಸಿಟ್ ಡಿಮಾಂಡ್ ಅನ್ನು ಪರಿಗಣಿಸಿತ್ತು.