ಭಾರತ ಎಂದಿಗೂ ಪೊಲೀಸ್ ರಾಜ್ಯವಾಗಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
"ತನಿಖಾ ಸಂಸ್ಥೆಗಳು ಸಾಮ್ರಾಜ್ಯಶಾಹಿ ಯುಗದ ಪಡಿಯಚ್ಚುಗಳಾಗುವಂತಿಲ್ಲ"

ಹೊಸದಿಲ್ಲಿ: ಭಾರತ ಎಂದಿಗೂ ಪೊಲೀಸ್ ರಾಜ್ಯವಾಗಲು ಸಾಧ್ಯವಿಲ್ಲ ಹಾಗೂ ತನಿಖಾ ಸಂಸ್ಥೆಗಳು ಸಾಮ್ರಾಜ್ಯಶಾಹಿ ಯುಗದ ಪಡಿಯಚ್ಚುಗಳಾಗುವಂತಿಲ್ಲ ಎಂದು ಸುಪ್ರೀಂಕೋರ್ಟ್ ಕಟುವಾಗಿ ಹೇಳಿದೆ.
ಅಂತೆಯೇ ಮುಖ್ಯವಾಗಿ ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೆ ಇರುವ ಅಪರಾಧ ಪ್ರಕರಣಗಳಲ್ಲಿ ಅನಗತ್ಯ ಬಂಧನವನ್ನು ತಡೆಯಲು ಜಾಮೀನು ಮಂಜೂರು ಮಾಡಲು ಅನುಕೂಲವಾಗುವಂತೆ ಮತ್ತು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವಸ್ತುನಿಷ್ಠತೆ ತರಲು ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ.ಸುಂದ್ರೇಶ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದ್ದು, ಪೊಲೀಸರು ಸಾಮಾನ್ಯ ಪ್ರಕರಣಗಳಲ್ಲೂ ಬಂಧನ ಮಾಡುತ್ತಿರುವುದರಿಂದ ಮತ್ತು ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ಋಣಾತ್ಮಕವಾಗಿ ವಿಲೇವಾರಿ ಮಾಡುತ್ತಿರುವುದರಿಂದ ದೇಶದ ಜೈಲುಗಳು ವಿಚಾರಣಾಧೀನ ಕೈದಿಗಳಿಂದ ತುಂಬಿ ತುಳುಕುತ್ತಿವೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
"ಭಾರತದಲ್ಲಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವ ಪ್ರಮಾಣ ತೀರಾ ಕಡಿಮೆ. ಜಾಮೀಜು ಅರ್ಜಿಗಳನ್ನು ಋಣಾತ್ಮಕವಾಗಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ನ್ಯಾಯಾಲಯಗಳು ಈ ಅಂಶಕ್ಕೆ ಹೆಚ್ಚು ಒತ್ತು ನೀಡಬೇಕು ಎನಿಸುತ್ತದೆ. ಶಿಕ್ಷೆಯಾಗುವ ಸಾಧ್ಯತೆ ತೀರಾ ವಿರಳ ಎನಿಸುವ ಸಂದರ್ಭಗಳಲ್ಲಿ ನ್ಯಾಯಾಲಯಗಳು ಕಾನೂನು ತತ್ವಗಳಿಗೆ ವಿರುದ್ಧವಾಗಿ ಜಾಮೀನು ಅರ್ಜಿಗಳನ್ನು ಕಟ್ಟುನಿಟ್ಟಾಗಿ ನಿರ್ಧರಿಸಬೇಕು" ಎಂದು ಸಲಹೆ ಮಾಡಿದ್ದಾರೆ.
ಜೈಲಿನಲ್ಲಿ ಬಂಧನದಲ್ಲಿದ್ದರೂ ಅಂತಿಮವಾಗಿ ಕೈದಿಗಳು ಆರೋಪಮುಕ್ತಗೊಳ್ಳುವುದು "ತೀರಾ ಅನ್ಯಾಯದ ಪ್ರಕರಣ" ಆಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಬಂಧನ ಹಾಗೂ ಜಾಮೀಜು ಮಂಜೂರು ಮಾಡುವ ಸಂಬಂಧ ತನಿಖಾ ಏಜೆನ್ಸಿಗಳಿಗೆ ಮತ್ತು ಅಧೀನ ನ್ಯಾಯಾಲಯಗಳಿಗೆ ನಿರ್ದೇಶನಗಳನ್ನು ನೀಡಿರುವ ಸುಪ್ರೀಂಕೋರ್ಟ್, ನ್ಯಾಯಾಂಗದ ವಿವೇಚನಾ ಅಧಿಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವದ ಉಲ್ಲಂಘನೆ ಸಮರ್ಥನೆ ಆಗಬಾರದು; ಆದಾಗ್ಯೂ ಅದೇ ಆರೋಪ ಎದುರಿಸುತ್ತಿರುವ ಆರೋಪಿಗಳನ್ನು ಅದೇ ನ್ಯಾಯಾಲಯ ಅಥವಾ ಇತರ ನ್ಯಾಯಾಲಯಗಳು ಭಿನ್ನವಾಗಿ ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.







