ಗುಜರಾತ್, ಮಧ್ಯಪ್ರದೇಶಗಳಲ್ಲಿ ಮಳೆ ಅಬ್ಬರಕ್ಕೆ 14 ಮಂದಿ ಬಲಿ

(Photo | PTI)
ಹೊಸದಿಲ್ಲಿ: ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಮಳೆ ಸಂಬಂಧಿ ಅನಾಹುತಗಳಿಗೆ ಕನಿಷ್ಠ 14 ಮಂದಿ ಬಲಿಯಾಗಿದ್ದಾರೆ. ಪಶ್ಚಿಮ ಹಾಗೂ ಕೇಂದ್ರ ಭಾರತದಲ್ಲಿ ಸೊಮವಾರದಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿತೀರಗಳ ಜನತೆಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಗೋದಾವರಿ ನದಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಗಡಚಿರೋಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಮತ್ತು ಪ್ರವಾಹದ ಬಳಿಕ ಮೂವರು ನಾಪತ್ತೆಯಾಗಿದ್ದಾರೆ.
ಕಳೆದ ಮೂರು ದಿನಗಳಲ್ಲಿ ತುಂಬಿ ಹರಿಯುತ್ತಿರುವ ನಾಲೆಗಳಲ್ಲಿ ಮೂವರು ಕೊಚ್ಚಿಕೊಂಡು ಹೋಗಿದ್ದು, ಅವರ ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಲೆಗಳಲ್ಲಿ ಕೊಚ್ಚಿಕೊಂಡು ಹೋಗಿರುವ ಇನ್ನೂ ಮೂವರು ಪತ್ತೆಯಾಗಿಲ್ಲ.
ಗುಜರಾತ್ನ ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಕನಿಷ್ಠ ಏಳು ಮಂದಿ ಮಳೆಸಂಬಂಧಿ ಅನಾಹುತಗಳಿಗೆ ಬಲಿಯಾಗಿದ್ದಾರೆ. 468 ಮಂದಿಯನ್ನು ರಕ್ಷಿಸಲಾಗಿದ್ದು, ಸುಮಾರು 9 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಗಳಿಗೆ ಕರೆದೊಯ್ಯಲಾಗಿದೆ. ದಕ್ಷಿಣ ಗುಜರಾತ್ನ ಡಾಂಗ್, ನವಸಾರಿ, ತಾಪಿ ಮತ್ತು ವಲ್ಸದ್ ಜಿಲ್ಲೆಗಳಲ್ಲಿ ಮಳೆಯಿಂದ ವ್ಯಾಪಕ ಹಾನಿಯಾಗಿದ್ದು, ಕೇಂದ್ರ ಗುಜರಾತ್ ಪಂಚಮಹಲ್, ಛೋಟಾ ಉದೇಪುರ ಮತ್ತು ಖೇಡಾ ಜಿಲ್ಲೆಗಳೂ ನೆರೆಪೀಡಿತವಾಗಿವೆ.
ಮಧ್ಯಪ್ರದೇಶದ 52 ಜಿಲ್ಲೆಗಳ ಪೈಕಿ 32 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿ ಸಿದೆ. ಮಳೆ ಹಾಗೂ ಸಿಡಿಲಿಗೆ ಕಳೆದ 24 ಗಂಟೆಗಳಲ್ಲಿ ಕನಿಷ್ಠ ಏಳು ಮಂದಿ ಬಲಿಯಾಗಿದ್ದಾರೆ ಎಂದು indianexpress.com ವರದಿ ಮಾಡಿದೆ.







