ಕಾಣಿಯೂರು | ಹೊಳೆಗೆ ಕಾರು ಬಿದ್ದ ಪ್ರಕರಣ: ನೀರುಪಾಲಾಗಿದ್ದ ಇಬ್ಬರ ಮೃತದೇಹಗಳು ಪತ್ತೆ

ಕಡಬ, ಜು.12: ಕಾಣಿಯೂರು ಸಮೀಪದ ಬೈತ್ತಡ್ಕ ಹೊಳೆಗೆ ಕಾರು ಬಿದ್ದು ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿವೆ.
ಘಟನಾ ಸ್ಥಳದಿಂದ 200 ಮೀಟರ್ ದೂರದ ಮರಕ್ಕಡ ಹೊಳೆಯಲ್ಲಿ ಇಂದು ಬೆಳಗ್ಗೆ ಓರ್ವನ ಮೃತದೇಹ ಮೊದಲು ಪತ್ತೆಯಾಗಿತ್ತು. ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಜೋತುಬಿದ್ದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ತೀವ್ರಗೊಳಿಸಿದ ರಕ್ಷಣಾ ತಂಡ ಅಲ್ಲೇ ಸ್ವಲ್ಪ ದೂರದಲ್ಲಿ ಇನ್ನೋರ್ವನ ಮೃತದೇಹವನ್ನೂ ಪತ್ತೆಹಚ್ಚಿ ಮೇಲಕ್ಕೆತ್ತಿದ್ದಾರೆ.
ಇದರೊಂದಿಗೆ ಕಳೆದೆರಡು ದಿನಗಳಿಂದ ಯುವಕರ ನಾಪತ್ತೆಗೆ ಸಂಬಂಧಿಸಿ ಮೂಡಿದ್ದಂತಹ ಗೊಂದಲಗಳಿಗೆ ತೆರೆ ಬಿದ್ದಿದೆ.
ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ. ಸ್ಥಳದಲ್ಲಿ ಪೊಲೀಸ್, ಕಂದಾಯ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿದ್ದರು.
ಜು.9ರಂದು ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಉಕ್ಕಿ ಹರಿಯುತ್ತಿರುವ ಹೊಳೆಗೆ ಬಿದ್ದ ಪರಿಣಾಮ ವಿಟ್ಲದ ಕುಂಡಡ್ಕ ನಿವಾಸಿ ಧನುಷ್ (26) ಹಾಗೂ ಕನ್ಯಾನ ನಿವಾಸಿ ಧನಂಜಯ ಎಂಬವರು ನೀರುಪಾಲಾಗಿ ನಾಪತ್ತೆಯಾಗಿದ್ದರು.