ನೆರೆ | ಮುಂಜಾಗೃತಾ ಕ್ರಮ ವಹಿಸಲು ಸರಕಾರ ವಿಫಲ: ಕಾಂಗ್ರೆಸ್ ನಾಯಕರ ಆಕ್ರೋಶ

ಮಂಗಳೂರು, ಜು. 11: ಈ ಹಿಂದಿನ ಕೆಲ ವರ್ಷಗಳಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪೂರ್ಣ ಪ್ರಮಾಣದಲ್ಲಿ ಪರಿಹಾರ ಒದಗಿಸುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರ ಈ ಬಾರಿ ಮುಂಜಾಗೃತಾ ಕ್ರಮವನ್ನೂ ವಹಿಸಿಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕರು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಕರೆಯಲಾದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕಳೆದ ಸುಮಾರು ಮೂರು ವರ್ಷಗಳಲ್ಲಿ ಮಳೆ, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಸಮೀಕ್ಷೆ ನಡೆದು ಕೇಂದ್ರಕ್ಕೆ ವರದಿ ಸಲ್ಲಿಸಿದರೂ ಸೂಕ್ತ ಸ್ಪಂದನ ದೊರಕಿಲ್ಲ. 25 ಬಿಜೆಪಿ ಸಂಸದರು, ಡಬಲ್ ಇಂಜಿನ್ ಸರಕಾರವಿದ್ದರೂ ಪ್ರಯೋಜನವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಕಳೆದ ಸುಮಾರು ಮೂರು ವರ್ಷಗಳಲ್ಲಿ ಸುಮಾರು 8,000 ಕೋಟಿ ರೂ.ನಷ್ಟು ಹಾನಿಯಾಗಿದ್ದು, ಕೇಂದ್ರದಿಂದ ದೊರಕಿದ್ದು, 3,965 ಕೋಟಿ ರೂ. ಮಾತ್ರ. ಈ ಹಣದಲ್ಲಿ ರಾಜ್ಯ ಸರಕಾರದ ಶೇ.40 ಕಳೆದು ಕಾಮಗಾರಿಗಳಲ್ಲಿ ಎಷ್ಟು ಕೆಲಸ ಆಗಿದೆ ಎಂಬುದನ್ನು ಊಹಿಸಬಹುದಾಗಿದೆ. ಈ ಬಾರಿಯೂ ಮಳೆಯಿಂದಾಗಿ ದ.ಕ. ಜಿಲ್ಲೆಯಲ್ಲಿ ನೆರೆಯಿಂದ ಸಾಕಷ್ಟು ಜನರು ತತ್ತರಿಸಿದ್ದಾರೆ. 185 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಾಗಿದೆ. 12 ಹೆಕ್ಟೇರ್ ಅಡಿಕೆ ತೋಟ ಹಾನಿಗೊಳಗಾಗಿದೆ. ಅಧಿಕೃತವಾಗಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಅಂಗನವಾಡಿ, ಶಾಲಾ ಕಾಲೇಜು ಕಟ್ಟಡಗಳಿಗೆ ಹಾನಿಯಾಗಿದೆ. ಕಡಲ್ಕೊರೆತ ತೀವ್ರವಾಗಿದೆ. ಆದರೆ ಉಸ್ತುವಾರಿ ಸಚಿವರು ಮಾತ್ರ ಭೇಟಿ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಮಳೆಗಾಲಕ್ಕೆ ಮುಂಚಿತವಾಗಿ ಸರ್ವ ಪಕ್ಷಗಳ ಸಭೆ ಕರೆದು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.
ಪ್ರಾಕೃತಿಕ ವಿಕೋಪದ ಸಂದರ್ಭ ಜನರಿಗಾಗಿರುವ ತೊಂದರೆಯನ್ನು ಆಲಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಸಚಿವರು ವಿಫಲವಾಗಿರುವುದಕ್ಕೆ ಮುಖ್ಯಮಂತ್ರಿಯ ಜಿಲ್ಲಾ ಭೇಟಿ ಸಾಕ್ಷಿಯಾಗಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಮಸ್ಯೆ ಗಂಭೀರವಾಗಿದೆ. ಹಿಂದೆಲ್ಲಾ ಮಳೆಗಾಲಕ್ಕೆ ಮುಂಚಿತವಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಿ ಕ್ರಮ ವಹಿಸಲಾಗುತ್ತಿತ್ತು. ತುರ್ತು ಪರಿಹಾರ ನೀಡುವ ಕ್ರಮವಾಗುತ್ತಿತ್ತು. ಆದರೆ ಅದ್ಯಾವುದೂ ಪ್ರಸಕ್ತ ಸರಕಾರದಿಂದ ಆಗುತ್ತಿಲ್ಲ. ಸಜೀವ ಸರಕಾರಕ್ಕೆ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಸರ್ವಪಕ್ಷ ಸಭೆ ನಡೆಸಲು ವಿಪಕ್ಷ ಒತ್ತಾಯ ಮಾಡಬೇಕಾದ ಅಗತ್ಯವಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸದಾಶಿವ ಉಳ್ಳಾಲ್, ಶಾಹುಲ್ ಹಮೀದ್, ಶುಭೋದಯ ಆಳ್ವ, ನೀರಜ್ ಪಾಲ್, ಸುಧೀರ್ ಟಿ.ಕೆ., ಲಾರೆನ್ಸ್, ಭರತೇಶ್, ಜೋಕಿಂ, ವರದೇಶ್ ಅಮೀನ್, ಸುರೇಂದ್ರ ಕಾಂಬ್ಳಿ ಮೊದಲಾದವರು ಉಪಸ್ಥಿತರಿದ್ದರು.
