"ಅವ್ಯವಸ್ಥೆ, ಅವೈಜ್ಞಾನಿಕ ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಂದ ಮುಕ್ತಿ ನೀಡಿ"
ಸಿಎಂ ಆಗಮಿಸುವ ವೇಳೆ ಪ್ರತಿಭಟನೆಗೆ ಎಸ್.ಡಿ.ಪಿ.ಐ. ನಿರ್ಧಾರ

ಬಂಟ್ವಾಳ, ಜು.12: ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಂದ ಜಿಲ್ಲೆಯ ಜನತೆಗೆ ಮುಕ್ತಿ ನೀಡಿ ಎಂದು ಇಂದು ಸಂಜೆ ಟೋಲ್ ಗೇಟ್ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಚರಿಸುವಾಗ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗುವುದು ಎಂದು ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ತಿಳಿಸಿದೆ.
ಕೆಲವು ದಿನಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ಕರಾವಳಿ ವ್ಯಾಪಕ ಹಾನಿ ಸಂಭವಿದ್ದು ಇದರ ಪರಿಶೀಲನೆ ಹಾಗೂ ಪರಿಹಾರ ಕಾರ್ಯಕ್ಕೆ ಮುಖ್ಯಮಂತ್ರಿ ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದ ಬ್ರಹ್ಮರಕೂಟ್ಲು ಟೋಲ್ ಗೆಟ್ ಸಂಪೂರ್ಣವಾಗಿ ಅವೈಜ್ಞಾನಿಕತೆಯಿಂದ ಕೂಡಿದ್ದು ಅದೊಂದು ಹಣ ಸುಲಿಗೆಯ ಕೇಂದ್ರದಂತಿದೆ. ಮಳೆಗಾಲ ಆರಂಭವಾದ ಬಳಿಕ ಟೋಲ್ ಗೇಟ್ ನ ರಸ್ತೆಯಲ್ಲಿ ಡಾಂಬರು ಕಿತ್ತು ಗೋಗಿದ್ದು ಬೃಹತ್ ಹೊಂಡಗಳು ಬಿದ್ದಿವೆ. ಆದರೂ ಈ ವರೆಗೆ ಅದನ್ನು ದುರಸ್ತಿ ಮಾಡಿಲ್ಲ. ಒಂದು ಗೇಟ್ ನಿಂದ ಮಾತ್ರ ವಾಹನಗಳು ಸಂಚರಿಸುತ್ತಿದೆ.
ರಸ್ತೆಯಲ್ಲಿ ಹೊಂಡಗಳಿಂದಾಗಿ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿದೆ. ಇಲ್ಲಿ ವಾಹನಗಳು ತಾಸುಗಟ್ಟಲೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ದಿನನಿತ್ಯ ತುರ್ತು ವಾಹನಗಳು ಇಲ್ಲಿ ಸಿಲುಕಿಕೊಂಡು ಪರದಾಡುತ್ತವೆ. ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸುವ ವಾಹನ ಸವಾರರ ಮೇಲೆ ಟೋಲ್ ಸಿಬ್ಬಂದಿಗಳು ಸೇರಿ ಹಲ್ಲೆ ನಡೆಸುವ, ಗೂಡಾಗಿರಿ ಮಾಡುವ ಪ್ರಕರಣಗಳು ನಡೆಯುತ್ತಿವೆ.
ಬ್ರಹ್ಮರಕೂಟ್ಲು ಟೋಲ್ ವಸೂಲಿಗೆ ಅಯೋಗ್ಯವಾದ ಪ್ರದೇಶವಾಗಿದೆ. ಆದರೆ ಇದರ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಈ ಮಾರ್ಗವಾಗಿ ಸಂಚರಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಇದನ್ನೆಲ್ಲಾ ಕಂಡರೂ ಕಾಣದಂತೆ ಇದ್ದಾರೆ. ಈ ಬಗ್ಗೆ ಅವರು ಯಾವುದೇ ಕ್ರಮವಾಗಲಿ, ಪರಿಹಾರವಾಗಿ ಮಾಡುತ್ತಿಲ್ಲ. ಈ ಟೋಲ್ ಗೇಟ್ ನಿಂದ ಜಿಲ್ಲೆಯ ಜನರು ನಿರಂತರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಂದ ಜಿಲ್ಲೆಯ ಜನರಿಗೆ ಮುಕ್ತಿ ನೀಡುವಂತೆ ಒತ್ತಾಯಿಸಿ ಸಂಜೆಯ ವೇಳೆಗೆ ಮುಖ್ಯಮಂತ್ರಿ ಬಂಟ್ವಾಳದಿಂದ ಮಂಗಳೂರಿಗೆ ತೆರಳುವ ವೇಳೆ ಟೋಲ್ ಗೇಟ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆ ವೇಳೆ ಮುಖ್ಯಮಂತ್ರಿಗೆ ಇಲ್ಲಿನ ಅವ್ಯವಸ್ಥೆಯ ಬಗೆಗಿನ ಫೋಸ್ಟರ್ ಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.