ಉಡುಪಿ; ಸಚಿವ ಕೋಟ ಬೆಂಗಾವಲು ಪೊಲೀಸ್ ವಾಹನ ಪಲ್ಟಿ: ಎಎಸ್ಸೈ ಸಹಿತ ಇಬ್ಬರಿಗೆ ಗಾಯ

ಬ್ರಹ್ಮಾವರ: ಉಪ್ಪೂರು ಕೆ.ಜಿ.ರೋಡ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ ಸಚಿವರ ಬೆಂಗಾವಲು ಪೊಲೀಸ್ ವಾಹನವೊಂದು ಪಲ್ಟಿಯಾಗಿದ್ದು, ಎಎಸ್ಸೈ ಸಹಿತ ಇಬ್ಬರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಗಾಯಗೊಂಡವರನ್ನು ಡಿಎಆರ್‌ನ ಎಎಸ್ಸೈ ಗಣೇಶ್ ಆಳ್ವ ಹಾಗೂ ಚಾಲಕ ಚರಣ್ ಎಂದು ಗುರುತಿಸಲಾಗಿದೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋಟದ ಮನೆಯಿಂದ ಹೊರಟಿದ್ದು, ಇವರಿಗೆ ಉಡುಪಿ ಜಿಲ್ಲೆಯ ಗಡಿ ಹೆಜಮಾಡಿಯವರೆಗೆ ಬೆಂಗಾವಲು ಆಗಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಜೀಪು ಸಚಿವರ ಕಾರಿನ ಹಿಂದೆ ಹೊರಟಿತ್ತು.
ಈ ವೇಳೆ ಬೆಂಗಾವಲು ಪೊಲೀಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಇರುವ ಡಿವೈಡರ್ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಜೀಪಿನಲ್ಲಿದ್ದ ಎಎಸ್ಸೈ ಹಾಗೂ ಚಾಲಕ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Next Story





