ಭಗವದ್ಗೀತೆ ಪಠ್ಯಕ್ಕೆ ಸೇರಿಸಿದರೆ ಕೆಲವರಿಗೆ ಕೇಸರೀಕರಣದ ಭಯ: ಅದಮಾರು ಶ್ರೀ

ಉಡುಪಿ: ಜೀವನದಲ್ಲಿ ಸಾಧನೆಯ ಹಾದಿಗೆ ಸ್ಫೂರ್ತಿಯಾಗಿರುವ ಭಗವದ್ಗೀತೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸುವ ಅಗತ್ಯವಿದೆ. ಭಗವದ್ಗೀತೆ ಪಠ್ಯಕ್ಕೆ ಸೇರಿಸಿದರೆ ಎಲ್ಲಿ ಕೇಸರೀಕರಣವಾಗುತ್ತದೆಯೋ ಎಂಬ ಭಯ ಕೆಲವರಿಗೆ ಇದೆ ಎಂದು ಅದಮಾರು ಹಿರಿಯ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅದಮಾರು ಮಠ, ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಸೋಮವಾರ ಆಯೋಜಿಸಲಾದ ಶ್ರೀಗಳ ಸನ್ಯಾಸದೀಕ್ಷಾ ಸುವರ್ಣ ಮಹೋತ್ಸವದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು. ನಮ್ಮ ರಾಷ್ಟ್ರಧ್ವಜದ ಮೇಲಿರುವ ಮೊದಲ ಬಣ್ಣವೇ ಕೇಸರಿ. ಇದು ತ್ಯಾಗದ ಸಂಕೇತವಾಗಿದೆ. ಆದರೆ ನಮ್ಮ ಜನರು ತ್ಯಾಗಕ್ಕೆ ಸಿದ್ದರಿಲ್ಲ. ಭೋಗಕ್ಕೆ ಸಿದ್ದರಿದ್ದಾರೆ. ದೇವರು, ದೇಶದ ಮೇಲೆ ನಿಷ್ಠೆ ಇಲ್ಲದವರಿಗೆ ಕೆಂಪು ಬಣ್ಣವೇ ಸೂಕ್ತ ಎಂದರು.
ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಓಂಪ್ರಕಾಶ ಭಟ್ ಮತ್ತು ದೇವಿದಾಸ್ ಸಂಪಾದಕತ್ವದಲ್ಲಿ ಹೊರತಂದಿರುವ ‘ಕೃಷ್ಣಪ್ರಿಯ-ವಿಶ್ವಪ್ರಿಯ’ ಮತ್ತು ೨೦೨೦-೨೨ರ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ ವಿಶ್ವಪ್ರಿಯ-ಈಶಪ್ರಿಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಭಟ್ಟ ಮುತ್ತೂರು ಅವರಿಗೆ ‘ಶ್ರೀ ನರಹರಿತೀರ್ಥ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ವಿದ್ವಾನ್ ಶ್ರೀನಿವಾಸ ಆಚಾರ್ಯ ಕರ್ನೂಲು ಅಭಿವಂದನಾ ಭಾಷಣ ಮಾಡಿದರು. ಪಾಂಡಿಚೇರಿಯ ಋಷಿಧರ್ಮ ಫೌಂಡೇಶನ್ ಅಧ್ಯಕ್ಷ ಡಿ.ಎ. ಜೋಸೆಫ್, ಶಾಸಕ ರಘುಪತಿ ಭಟ್, ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯದ ಸಂಚಾಲಕ ಎಂ.ಬಿ.ಪುರಾಣಿಕ್ ಉಪಸ್ಥಿತರಿದ್ದರು.
ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ಗೋವಿಂದರಾಜ್ ಸ್ವಾಗತಿಸಿದರು. ವಿದ್ವಾನ್ ಶ್ರೀನಿವಾಸ ಪೆಜತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಹೆಬ್ಬಾರ್ ವಂದಿಸಿದರು. ಡಾ.ಟಿ.ಎಸ್.ರಮೇಶ್ ಕಾರ್ಯಕ್ರಮ ನಿರೂಪಿಸಿದರು.