ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಪ್ರಕರಣ; ಕಿರುನೀರಾವರಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಇಂಜಿನಿಯರ್‌ಗೆ ಶಿಕ್ಷೆ
► 6 ವರ್ಷ ಸಜೆ, 2.50 ಕೋಟಿ ರೂ. ದಂಡ

ಮಂಗಳೂರು : ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆಯ ಪ್ರಕರಣಕ್ಕೆ ಸಂಬಂಧಿಸಿ ಕಿರು ನೀರಾವರಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎನ್.ಟಿ.ರಾಜಗೋಪಾಲ್‌ಗೆ ಮಂಗಳೂರಿನ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 6 ವರ್ಷಗಳ ಸಾದಾ ಸಜೆ ಹಾಗೂ 2.50 ಕೋ.ರೂ. ದಂಡ ವಿಧಿಸಿದೆ.
ಮಂಗಳೂರಿನ ಕಿರು ನೀರಾವರಿ ಇಲಾಖೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ಆಗಿದ್ದ ಎನ್.ಟಿ.ರಾಜಗೋಪಾಲ್ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ್ದ ಬಗ್ಗೆ ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ೨೦೧೦ರ ಮಾ.೧೭ರಂದು ಪ್ರಕರಣ ದಾಖಲಾಗಿತ್ತು.
ಅಂದಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಸದಾನಂದ ಎಂ.ವರ್ಣೇಕರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶ ಬಿ.ಬಿ. ಜಕಾತಿ ಮಂಗಳವಾರ ತೀರ್ಪು ನೀಡಿದ್ದಾರೆ.
ಲಂಚ ನಿಗ್ರಹ ಕಾಯ್ದೆ ೧೯೮೮ ಕಲಂ ೧೩(೧)(ಇ) ಹಾಗೂ ೧೩(೨)ರಂತೆ 6 ವರ್ಷಗಳ ಸಾದಾ ಸಜೆ ಹಾಗೂ 2.50 ಕೋ.ರೂ. ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದರೆ ಮತ್ತೆ ಒಂದುವರೆ ವರ್ಷ ಸಾದಾ ಸಜೆ ಶಿಕ್ಷೆ ಅನುಭವಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಸರಕಾರದ ಪರವಾಗಿ ಮಂಗಳೂರಿನ ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ವಾದ ಮಂಡಿಸಿದ್ದಾರೆ.
ಎನ್.ಟಿ.ರಾಜಗೋಪಾಲ್ ೨೦೧೬ರ ಅ.೩೦ರಂದು ಯಾದಗಿರಿ ಜಿಲ್ಲೆಯ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದು, ಇದೀಗ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ದ್ದಾನೆ ಎಂದು ತಿಳಿದು ಬಂದಿದೆ.







