ಬೆಲೆ ಏರಿಕೆಯನ್ನು ಅಭಿವೃದ್ಧಿ ಎಂದು ಪ್ರತಿಪಾದಿಸುವ ಬಿಜೆಪಿ: ಕಾಂಗ್ರೆಸ್ ಟೀಕೆ
ಉಡುಪಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಜನ ಸಾಮಾನ್ಯರು ಕಂಗಾಲಾಗಿದ್ದರೂ, ಕೇಂದ್ರ ಸರಕಾರ ಮೇಲಿಂದ ಮೇಲೆ ಅಡುಗೆ ಅನಿಲ ದರ ಹೆಚ್ಚಿಸುತ್ತಾ ಗಾಯದ ಮೇಲೆ ಬರೆ ಎಳೆಯುತ್ತಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಈಗಾಗಲೇ ಸಾವಿರ ರೂ.ಗಡಿ ದಾಟಿದ್ದು, ಇನ್ನೂ ೫೦ ರೂ. ದರ ಏರಿಕೆ ಮಾಡಿರುವ ಕ್ರಮವು ಜನ ವಿರೋಧಿ ನೀತಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ.
ಉಜ್ವಲ ಯೋಜನೆ ಹೆಸರಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸರಕಾರ ಸಾಂಪ್ರದಾಯಿಕ ಹಾಗೂ ವೆಚ್ಚ ರಹಿತ ಎರವಲು ಬಳಕೆ ನಾಶ ಮಾಡಿ ಬಡವರೂ ಅಡುಗೆಗೆ ಎಲ್‌ಪಿಜಿ ಸಿಲಿಂಡರ್ ಬಳಸುವಂತೆ ಮಾಡಿ ಅವರನ್ನೂ ಸಂಕಷ್ಟಕ್ಕೆ ಸಿಲುಕಿಸಿದ್ದು, ಬಿಜಿಪಿಯ ಸಾಧನೆ ಎನ್ನಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನೇ ಅಭಿವೃದ್ಧಿ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ಲೇವಡಿ ಮಾಡಿದೆ.
ಈಗಾಗಲೇ ಕೋವಿಡ್ ಸಂಕಷ್ಟದ ಹೊಡೆತದಿಂದ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಜನರು ಸರಕಾರದ ನಿರಂತರ ಬೆಲೆ ಏರಿಕೆಯ ಹೊಡೆತದಿಂದ ಕಂಗಾಲಾದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಆದರೆ ಕೇಂದ್ರ ಸರ್ಕಾರ ಕಳೆದ ೮ ವರ್ಷಗಳಲ್ಲಿ ಕಾರ್ಪೋರೇಟ್ ಕುಟುಂಬಗಳ ೧೦೭ ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡಿದೆ. ಶೇ.೩೩ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ.೨೨ಕ್ಕೆ ಇಳಿಸಿದೆ.
ಪ್ರತಿ ತಿಂಗಳು ೧.೪೦ ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸುವ ಸರಕಾರ ಇದನ್ನೇ ಅಭಿವೃದ್ಧಿ ಎಂದು ಪರಿಗಣಿಸಿ ಪ್ರತೀ ವಸ್ತುಗಳ ತೆರಿಗೆ ಸ್ಲಾಬ್ ಏರಿಕೆ ಮಾಡುತ್ತಿರುವ ನೀತಿ ಆತಂಕಕಾರಿ. ಒಂದೆಡೆ ಕೋವಿಡ್‌ನಿಂದಾಗಿ ವ್ಯಕ್ತಿಗತ ಆದಾಯ ಕುಸಿತ ಕಂಡರೆ ಇನ್ನೊಂದೆಡೆ ಸರಕಾರದ ತೆರಿಗೆ ನೀತಿ ಜನರ ಜೀವನವನ್ನೇ ಹಿಂಡುತ್ತಿದೆ.
ಜಿಎಸ್‌ಟಿ ಹೆಸರಲ್ಲಿ ಜನಸಾಮಾನ್ಯರು ಉಪಯೋಗಿಸುವ ಅಕ್ಕಿ, ಹಾಲು, ತುಪ್ಪ. ಗೋದಿಹಿಟ್ಟು, ಬೇಳೆ, ಬೆಲ್ಲಗಳಿಗೆ ಶೇ.೧೮ರಷ್ಟು ತೆರಿಗೆ ಹೇರಿ ಜನರು ನೆಮ್ಮದಿಯಿಂದ ಬಾಳು ನಡೆಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಉಪಯೋಗಿಸುವ ವಸ್ತುಗಳಿಗೆ ಅಧಿಕ ತೆರಿಗೆ ಹೇರಿ, ತೆರಿಗೆ ಮೇಲೆ ತೆರಿಗೆ ಹಾಕುವ ನೀತಿಯಿಂದ ಮಧ್ಯಮವರ್ಗ ಹೈರಣವಾಗಿದ್ದು ಸರಕಾರ ಜನರ ಸಂಕಷ್ಟಕ್ಕೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.