ಬಂಟ್ವಾಳ: ಮಳೆ ಹಾನಿ ಗ್ರಾಮಗಳಿಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ
ಗರಿಷ್ಠ ಪ್ರಮಾಣದ ಪರಿಹಾರ ನೀಡುವ ಭರವಸೆ

ಬಂಟ್ವಾಳ, ಜು.12: ನಿರಂತರ ಮಳೆಯಿಂದ ಆಸ್ತಿ ಪಾಸ್ತಿ ಹಾನಿಗೊಳಗಾದ ಸಂತ್ರಸ್ತರಿಗೆ ಸರಕಾರದಿಂದ ಗರಿಷ್ಠ ಪ್ರಮಾಣದ ಪರಿಹಾರವನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭರವಸೆ ನೀಡಿದರು.
ಮಳೆಯಿಂದ ಅತೀ ಹೆಚ್ಚು ಆಸ್ತಿ ಪಾಸ್ತಿ ಹಾನಿಗೊಳಗಾದ ತಾಲೂಕಿನ ಕಾವಳಪಡೂರು, ಅರಳ, ಸಂಗಬೆಟ್ಟು, ಕಾಡಬೆಟ್ಟು ಗ್ರಾಮಗಳಿಗೆ ಮಂಗಳವಾರ ತೆರಳಿ ಅಲ್ಲಿನ ಸ್ಥಿತಿ ಗತಿಯನ್ನು ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಈ ಹಿಂದೆ ಕನಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತಿತ್ತು. ಕನಿಷ್ಠ ಪರಿಹಾರ ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರಕಾರ ಅಧಿಕಾರಿಗಳ ಮೂಲಕ ನಷ್ಟದ ಸಂಪೂರ್ಣ ಮಾಹಿತಿ ಪಡೆದು ಬಳಿಕ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡಲು ಮುಂದಾಗಿದೆ ಎಂದರು.
ಪ್ರತಿ ಗ್ರಾಮದಲ್ಲಿ ಹಾನಿಯಾದ ವಿವರಗಳನ್ನು ಪಟ್ಟಿ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಾನಿಯಾದ ಸಂದರ್ಭದಲ್ಲಿ ಸ್ಥಳದಲ್ಲಿಯೇ 10 ಸಾವಿರ ರೂ. ನೀಡುವಂತೆ ಸರಕಾರ ಅದೇಶ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲು ತಾಲೂಕಿನ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಅಧಿಕಾರಿಗಳು ಉಪಸ್ಥಿತರಿದ್ದರು.
