ಇತಿಹಾಸ ಪಠ್ಯದಲ್ಲಿ ಹಿಂದೂ ಹತ್ಯಾಕಾಂಡಗಳ ಸೇರ್ಪಡೆಗೆ ಇತಿಹಾಸಕಾರರ ವಿರೋಧ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.12: ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಭಾರತದ ಇತಿಹಾಸದಲ್ಲಿ ನಡೆದ ಹಿಂದೂ ಹತ್ಯಾಕಾಂಡಗಳು ಸೇರಿಸಬೇಕು ಎಂದು ಇತಿಹಾಸತಜ್ಞರು ಶಿಫಾರಸ್ಸು ಮಾಡಿದ್ದಾರೆ ಎಂದು ಓದಿ ನಮಗೆ ಆಶ್ಚರ್ಯ ಉಂಟಾಗಿದೆ ಎಂದು ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಪಕರು ಸೇರಿ ಅನೇಕರು ತಿಳಿಸಿದ್ದಾರೆ.
ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಓ.ಅನಂತರಾಮಯ್ಯ, ಪ್ರೊ. ಎಸ್.ಚಂದ್ರಶೇಖರ್, ಪ್ರೊ. ಅಶೋಕ್ ಶೆಟ್ಟರ್, ಡಾ. ಅಶ್ವತ್ಥನಾರಾಯಣ, ಡಾ.ಎಸ್.ಪಿ.ವಾಗೀಶ್ವರಿ, ಡಾ.ಹಂ.ಗು.ರಾಜೇಶ್, ಡಾ.ಕೆ.ಸದಾಶಿವ, ಪ್ರೊ.ಎಂ.ಜಮುನಾ ಸೇರಿ ಒಂಭತ್ತು ಮಂದಿ ಇತಿಹಾಸಕಾರರು ಕಾರಣಗಳನ್ನು ನೀಡಿ ಇದನ್ನು ವಿರೋಧಿಸಿದ್ದಾರೆ.
ಹಿಂದೂ ಹತ್ಯಾಕಾಂಡಗಳ ಸೇರ್ಪಡೆಯಿಂದ ಮಕ್ಕಳ ಮನಸ್ಸಿನಲ್ಲಿ ಪರಸ್ಪರ ದ್ವೇಷ, ವೈಷಮ್ಯದ ಭಾವನೆ ಮೂಡಿಸುತ್ತದೆ. ಅದು ಸಂವಿಧಾನದ ಆಶಯಗಳಿಗೆ ಮತ್ತು ಶೈಕ್ಷಣಿಕ ಚೌಕಟ್ಟಿಗೆ ವಿರುದ್ಧವಾಗಿದ್ದು, ಸಮಾಜದ ಶಾಂತಿ, ಸೌಹಾರ್ದತೆ, ಸಹಭಾಳ್ವೆಗೆ ಭಂಗ ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಇತಿಹಾಸದಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಹಿಂದೂ-ಬೌದ್ಧರ ನಡುವೆ, ಹಿಂದೂ-ಜೈನರ ನಡುವೆ, ಹಿಂದೂ-ಹಿಂದೂಗಳ ನಡುವೆಯೇ ಹತ್ಯಾಕಾಂಡಗಳು ನಡೆದಿವೆ. ಅವುಗಳನ್ನು ಮರೆಮಾಚಿ ಯಾವುದೋ ಒಂದು ಧರ್ಮಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತದ ಇತಿಹಾಸದಲ್ಲಿ ಹಿಂದೂಗಳ ಹತ್ಯಾಕಾಂಡವಷ್ಟೇ ನಡೆದಿದೆ ಎಂದು ಬಿಂಬಿಸುವುದು ಚರಿತ್ರೆಗೆ ಮಾಡಿದ ಅಪಚಾರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಚರಿತ್ರೆಯಲ್ಲಿ ನಡೆದಿರುವ ಹತ್ಯಾಕಾಂಡಗಳಿಗೆ ಮೊದಲೂ ಇಲ್ಲ, ಕೊನೆಯೂ ಇಲ್ಲ. ಹರಪ್ಪ ನಾಗರಿಕತೆಯ ಅಂತ್ಯಕ್ಕೆ ಹೊರಗಿನಿಂದ ಬಂದ ಆಕ್ರಮಣಕಾರರು ಕಾರಣವೆಂದು ಹಲವು ಇತಿಹಾಸಕಾರರು ಬರೆದಿಲ್ಲವೇ? ಅಶೋಕ ಕಳಿಂಗ ರಾಜ್ಯದ ಮೇಲೆ ನಡೆಸಿದ ಯುದ್ಧದ ಭೀಕರತೆ ಕುರಿತು ತನ್ನ ಶಾಸನದಲ್ಲಿಯೇ ತಿಳಿಸಿಲ್ಲವೇ? ಮಾಗಡಿ ಸಮೀಪದ ಕಲ್ಯದಲ್ಲಿ ಶ್ರೀವೈಷ್ಣವರು ಜೈನರನ್ನು ಕೊಲ್ಲಲಿಲ್ಲವೇ? ರೈತರ ಮೇಲಿನ ತೆರಿಗೆ ವಿರೋಧಿಸಿದ ನೂರಾರು ಜಂಗಮರನ್ನು ಮಾತುಕತೆಗೆ ಕರೆದು ಚಿಕ್ಕದೇವರಾಜ ಒಡೆಯರ್ ಹತ್ಯೆಗೈಯಲಿಲ್ಲವೇ? ಮೈಸೂರು ರಾಜ್ಯದಲ್ಲಿ ಮರಾಠರು ಮಾಡಿದ ಲೂಟಿ ಮತ್ತು ಸಾವು ನೋವುಗಳಿಗೆ ಲೆಕ್ಕವಿದೆಯೆ? ದಲಿತರು, ಬುಡಕಟ್ಟು ಜನಾಂಗಗಳ ಮೇಲೆ ನೂರಾರು ಹತ್ಯಾಕಾಂಡಗಳು ನಡೆದಿಲ್ಲವೇ? ಅವುಗಳಲ್ಲಿ ತಮಗೆ ಬೇಕಾದ್ದನ್ನು ಮಾತ್ರ ಆಯ್ದು ಹೇಳುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ಇತಿಹಾಸದಲ್ಲಿ ಒಳಿತು ಮತ್ತು ಕೆಡಕುಗಳೆರಡೂ ಇದ್ದು, ಇತಿಹಾಸದಿಂದ ಸ್ನೇಹ, ಪ್ರೀತಿ, ಸಹಬಾಳ್ವೆ, ಸೌಹಾರ್ದತೆಯ ವಿಚಾರಗಳನ್ನು ಮುಗ್ಧ ಮನಸಿನ ಮಕ್ಕಳಿಗೆ ಕಲಿಸುವ ಮೂಲಕ ಬೌದ್ಧಿಕ ವಿಕಾಸಗೊಳಿಸಬೇಕೇ ಹೊರತು, ಕ್ರೌರ್ಯ, ದ್ವೇಷ, ಅಸೂಯೆಯ ಮೂಲಕ ವಿಕಾರಗೊಳಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.







