ಉಡುಪಿ: 55 ಮನೆಗಳಿಗೆ ಹಾನಿ; 33 ಲಕ್ಷಕ್ಕೂ ಅಧಿಕ ನಷ್ಟದ ಅಂದಾಜು

ಫೈಲ್ ಫೋಟೊ
ಉಡುಪಿ: ಕಳೆದ ನಾಲ್ಕು ದಿನಗಳ ಭಾರೀ ಗಾಳಿ-ಮಳೆಯಿಂದ ಉಡುಪಿ ಜಿಲ್ಲೆಯಾದ್ಯಂತ ೫೫ಕ್ಕೂ ಅಧಿಕ ಮನೆ, ದನದ ಕೊಟ್ಟಿಗೆ, ಶೌಚಾಲಯದ ಗೋಡೆಗಳಿಗೆ ಹಾನಿಯಾಗಿದ್ದು, ೩೩ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ನಿನ್ನೆಯ ಮಳೆಗೆ ಕುಂದಾಪುರ ತಾಲೂಕಿನಲ್ಲಿ ಅತ್ಯಧಿಕ ಹಾನಿಯಾಗಿದೆ. ಇಲ್ಲಿ ಮನೆಯೂ ಸೇರಿದಂತೆ ೧೪ ಕಟ್ಟಡಗಳಿಗೆ ಹಾನಿಯಾಗಿದ್ದು ೧೦ ಲಕ್ಷರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಇನ್ನು ಬ್ರಹ್ಮಾವರ ತಾಲೂಕಿನಲ್ಲಿ ೧೧ ಮನೆಗಳಿಗೆ ಹಾನಿಯಾಗಿ ೨.೫೦ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ. ಉಡುಪಿ ತಾಲೂಕಿನಲ್ಲಿ ಎಂಟು ಮನೆಗಳಿಗೆ ಐದು ಲಕ್ಷ ರೂ.ಗಳಿಗೂ ಅಧಿಕ ಹಾನಿಯಾಗಿದೆ. ಕಾರ್ಕಳದಲ್ಲಿ ಆರು ಮನೆಗಳಿಗೆ ೧೦ ಲಕ್ಷ ರೂ., ಕಾಪುವಿನಲ್ಲಿ ಐದು ಮನೆಗಳಿಗೆ ಸುಮಾರು ಎರಡು ಲಕ್ಷ ರೂ. ಹಾಗೂ ಬೈಂದೂರಿನಲ್ಲಿ ಸುಮಾರು ೧೦ ಮನೆಗಳಿಗೆ ೪.೨೦ ಲಕ್ಷ ರೂ.ನಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರದ ಬೆಳ್ಳಾಲದಲ್ಲಿ ಜಾನಕಿ ಆಚಾರ್ತಿ ಎಂಬವರ ಮನೆ ಸಂಪೂರ್ಣ ಹಾನಿಗೊಂಡಿದ್ದು ಐದು ಲಕ್ಷ ರೂ.ನಷ್ಟವನ್ನು ಅಂದಾಜಿಸಲಾಗಿದೆ. ಸೇನಾಪುರದ ಕೊರ್ಗು ಮನೆಗೆ ಒಂದು ಲಕ್ಷ ರೂ., ಹಾರ್ದಳ್ಳಿ ಮಂಡಳಿಯ ಸೀತಾ, ಸೀತಾ ಪೂಜಾರ್ತಿ, ಕುಳಂಜೆಯ ಸವಿತಾ, ಸಿದ್ಧಾಪುರದ ರೇವತಿ ಶೆಡ್ತಿ, ಕಾವ್ರಾಡಿಯ ಜಮೀಲಾ ಬಾನು ಮನೆಗೆ ತಲಾ ೫೦ ರೂ.ನಷ್ಟವಾಗಿರುವ ಬಗ್ಗೆ ವರದಿ ಬಂದಿದೆ.
ಬೈಂದೂರು ತಾಲೂಕಿನ ಹೇರೂರು ಗ್ರಾಮದ ದುರ್ಗ ಪೂಜಾರ್ತಿ, ಕಂಬದಕೋಣೆಯ ಚಂದು, ಬಡಾಕೆರೆಯ ಫಾತಿಮಾ ಬಿ., ಬಿಜೂರಿನ ಮಹಾಲಕ್ಷ್ಮೀ ಖಾರ್ವಿ ಅವರ ಮನೆಗೂ ಭಾಗಶ: ಹಾನಿಯಂದ ತಲಾ ೫೦ಸಾವಿರ ರೂ.ನಷ್ಟವಾಗಿದೆ.ಬಿಜೂರಿನ ಹೂವಮ್ಮ ಎಂಬವರ ಮನೆಗೆ ೭೫ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕಿನ ಪೆಜಮಂಗೂರಿನ ಮಹಾಬಲ ಆಚಾರ್ಯ, ಗಿರಿಜಾ, ಮತ್ತು ಬಾಬಣ್ಣ ಎಂಬವರ ಮನೆಗಳಿಗೆ ಒಟ್ಟು ಒಂದು ಲಕ್ಷ ರೂ.ನಷ್ಟು ನಷ್ಟ ಸಂಭವಿಸಿದೆ.ತಾಲೂಕಿನ ಉಪ್ಪೂರಿನ ಪೌಸ್ತಿನ್ ಮಸ್ಕರೇನಸ್ ಮನೆ ಗೋಡೆ ಕುಸಿದು ೪೦ ಸಾವಿರ, ಬೈಕಾಡಿಯ ನರಸಿಂಹ ಪೂಜಾರಿಯವರ ಮನೆಯ ಗೋಡೆ ಕುಸಿದು ೨೦ ಸಾವಿರ, ಕಾರ್ಕಡದ ಶೀನ ಪೂಜಾರಿ ಎಂಬವರ ಮನೆಗೆ ೨೫ ಸಾವಿರ ರೂ., ಕಾಳಿ ಪೂಜಾರ್ತಿ ಮನೆಗೆ ೨೫ ಸಾವಿರ, ಮಣೂರಿನ ವಿನೋದ ಹಾಗೂ ೩೮ ಕಳ್ತೂರಿನ ಆನಂದ ಪೂಜಾರಿ ಮನೆಗೆ ೩೦ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕಿನ ಶಿರ್ವದ ಮುರ್ಗೇಶ ಎಂಬವರ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಯಾಗಿದೆ. ಮೂಡಬೆಟ್ಟು ಗ್ರಾಮದ ಮೇರಿ ಮೆಂಡೋನ್ಸಾ ಎಂಬವರ ಮನೆಗೆ ಭಾಗಶ: ಹಾನಿಯಾಗಿ ೬೦ಸಾವಿರ, ಸುಧಾಕರ ಆಚಾರ್ಯರ ಮನೆಗೆ ೧೫ಸಾವಿರ ರೂ., ಯೇಣಗುಡ್ಡೆಯ ಸಾವಿತ್ರಿ ಆಚಾರ್ಯರ ಮನೆಗೆ ೨೫ ಸಾವಿರ ರೂ.ನಷ್ಟವಾಗಿದೆ.
ಕಾರ್ಕಳ ತಾಲೂಕು ಹಿರ್ಗಾನ ಕಾನಂಗಿಯ ಜಗದೀಶ್ ಶೆಟ್ಟಿಯವರ ಮನೆಗೆ ಮೂರು ಲಕ್ಷ ರೂ., ನಿಟ್ಟೆಯ ವಾರಿಜಾ ಪೂಜಾರಿಯವರ ಮನೆಗೆ ಐದು ಲಕ್ಷ ರೂ., ಕಡ್ತಲದ ಗೋಪಾಲ ನಾಯಕ್ ಮನೆಗೆ ೩೦ ಸಾವಿರದಷ್ಟು ಹಾನಿಯಾ ಗಿದೆ. ಕಾರ್ಕಳ ಕಸಬಾದ ಸುರೇಂದ್ರ ಶೆಟ್ಟಿ ಎಂಬವರ ಮನೆ ಸಂಪೂರ್ಣ ಹಾನಿ ಗೊಂಡಿದ್ದು ೫೦ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ. ಸಾಣೂರಿನ ಶೀನ ಹರಿಜನ ಅವರ ಮನೆಯ ಗೋಡೆ ಭಾಗಶ: ಕುಸಿದು ೫೦ ಸಾವಿರ ರೂ. ಕುಕ್ಕುಂದೂರು ಉದಯ ಆಚಾರ್ಯರ ಮನೆಗೆ ೨೫ ಸಾವಿರ ರೂ.ನಷ್ಟವಾಗಿದೆ.
ಉಡುಪಿಯಲ್ಲಿ ಬೊಮ್ಮಾರಬೆಟ್ಟುವಿನ ವಿಶ್ವನಾಥ ದೇವಾಡಿಗರ ಮನೆಗೆ ಒಂದು ಲಕ್ಷ ರೂ., ಅಲೆವೂರಿನ ಲಕ್ಷ್ಮೀ ಪೂಜಾರ್ತಿ ಎಂಬವರ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು ೯೨,೦೦೦ರೂ., ಕುತ್ಪಾಡಿಯ ರಾಮ ಪೂಜಾರಿ ೭೬ ಬಡಗುಬೆಟ್ಟಿನ ನರಸಿಂಹ ಉಪಾಧ್ಯರ, ಕೊರಂಗ್ರಪಾಡಿಯ ಶಶಿ ಹಾಗೂ ಸಿರಿಲ್ ಪ್ರಕಾಶ್ ಮನೆಗೆ ತಲಾ ೬೦ ಸಾವಿರ ರೂ.ಗಳಷ್ಟು ನಷ್ಟವಾಗಿದೆ.
ಕುಂದಾಪುರ ತಾಲೂಕು ಬೆಳ್ಳಾಳದ ಮಂಜುನಾಥ ಬಳೆಗಾರ ಎಂಬವರ ತೋಟಗಾರಿಕಾ ಬೆಳೆ ಭಾಗಶ: ಹಾನಿಗೊಂಡಿದ್ದು ೨೫ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಮಳೆಯ ಅಬ್ಬರ ಇಳಿತ: ಜಿಲ್ಲೆಯಲ್ಲಿ ಕಳೆದ ಸುಮಾರು ಒಂದು ವಾರದಿಂದ ಬಿರುಸಾಗಿ ಸುರಿದ ಮಳೆ ಇಂದು ದಿನದ ಹೆಚ್ಚಿನ ಹೊತ್ತು ವಿಶ್ರಾಂತಿ ಪಡೆದಿತ್ತು. ಕೆಲವು ದಿನಗಳ ಬಳಿಕ ಸೂರ್ಯನ ದರ್ಶನವೂ ಸಾಧ್ಯವಾಯಿತು. ಮಧ್ಯೆ ಒಂದೆರಡು ಬಾರಿ ಮಳೆ ಸುರಿದರೂ, ತಗ್ಗು ಪ್ರದೇಶಗಳಲ್ಲಿದ್ದ ನೀರು ಹರಿದು ಹೋಗಿತ್ತು.
ಇದರಿಂದ ಕಳೆದ ಹತ್ತು ದಿನಗಳಿಂದ ಜಿಲ್ಲೆಯಲ್ಲಾದ ಮನೆ, ಕಟ್ಟಡಗಳ ಹಾನಿಯೊಂದಿಗೆ ಭತ್ತ ಸೇರಿದಂತೆ ಬೆಳೆ ಹಾನಿ ಹಾಗೂ ತೋಟಗಾರಿಕಾ ಬೆಳೆ ಹಾನಿಯ ನಿಖರ ಅಂದಾಜು ಮಾಡುವ ಪ್ರಕ್ರಿಯೆಗೆ ಅಧಿಕಾರಿಗಳು ಚಾಲನೆ ನೀಡಿದರು.







