ಪಂಜಿಕಲ್ಲು ಕಾರ್ಮಿಕರ ಸಾವಿಗೆ ಸ್ಥಳೀಯಾಡಳಿತದ ನಿರ್ಲಕ್ಷ್ಯ ಕಾರಣ: ರಮಾನಾಥ ರೈ

ಬಂಟ್ವಾಳ, ಜು.12: ಪಂಜಿಕಲ್ಲು ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರ ದಾರುಣ ಸಾವಿಗೆ ಮಂದಗತಿಯ ರಕ್ಷಣಾ ಕಾರ್ಯಾಚರಣೆ ಹಾಗೂ ಸಕಾಲದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯದಿರುವುದು ಕಾರಣ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.
ಮಂಗಳವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರಂತದ ಬಗ್ಗೆ ಸ್ಥಳೀಯಾಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಸ್ಥಳೀಯಾಡಳಿತ ಕನಿಷ್ಠ ಜೆಸಿಬಿ ವ್ಯವಸ್ಥೆ, ವೈದ್ಯಕೀಯ ತಂಡವನ್ನು ಸ್ಥಳಕ್ಕೆ ತರಿಸಿದ್ದರೆ ಕಾರ್ಮಿಕರ ಪ್ರಾಣ ರಕ್ಷಿಸಬಹುದಿತ್ತು ಎಂದು ಹೇಳಿದರು.
ದುರಂತ ನಡೆದ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಪಿಯೂಸ್ ಎಲ್. ರೋಡ್ರಿಗಸ್ ಅವರು ತನ್ನ ಹಿಟಚಿ ತರಿಸಿ ಮಣ್ಣು ತೆರವಿಗೆ ಸಹಕರಿಸಿದ್ದಾರೆ. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೈದ್ಯರು ಎಲ್ಲಿ ಎಂದು ಪ್ರಶ್ನಿಸಿ ಗರಂ ಆಗಿದ್ದಾರೆ. ಕಾರ್ಮಿಕರನ್ನು ಸಾಗಿಸಲು ಆಂಬುಲೆನ್ಸ್ ಕೂಡಾ ಇರಲಿಲ್ಲ. ಆಕ್ಸಿಜನ್ ವ್ಯವಸ್ಥೆ ಸಹಿತ ವೈದ್ಯಕೀಯ ತಂಡ ಸ್ಥಳದಲ್ಲಿ ಇದ್ದಿದ್ದರೆ ಕಾರ್ಮಿಕರ ಪ್ರಾಣ ಹಾನಿ ಸಂಭವಿಸುತ್ತಿರಲಿಲ್ಲ ಎಂದರು.
ಕಾರ್ಮಿಕರನ್ನು ಮಣ್ಣಿನಿಂದ ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಅವರಿಗೆ ಚಿಕಿತ್ಸೆ ಸಿಕ್ಕಲ್ಲ. ಅಲ್ಲಿಂದ ಕಾರ್ಮಿಕರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಬಿಲ್ ಭದ್ರತೆ ವಹಿಸಿಕೊಳ್ಳಲು ಜನರಿಲ್ಲದ ಪರಿಣಾಮ ಅಲ್ಲಿಂದ ಮತ್ತೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುಮಾರು ಅಲೆದಾಡಿದ್ದು ಇದರಿಂದ ಕಾರ್ಮಿಕರ ಅಂತ್ಯ ಕಂಡಿದೆ ಎಂದು ಅವರು ಆರೋಪಿಸಿದರು.
ಅನಿರೀಕ್ಷಿತ ಘೋರ ದುರಂತದಿಂದ ಮಾನಸಿಕವಾಗಿ ಕುಗ್ಗಿರುವ ಮನೆ ಮಾಲಕಿಯ ವಿರುದ್ಧ ಗ್ರಾಮ ಕರಣಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ತಪ್ಪನ್ನು ಮುಚ್ಚಿ ಹಾಕುವ ಸಲುವಾಗಿ ಈ ದೂರು ನೀಡಲಾಗಿದೆ. ಇದು ಖಂಡನೀಯವಾಗಿದೆ. ದುರಂತದ ಅಪಾಯವಿದ್ದಾಗ ಜನರ ತೆರವಿಗೆ ಮೌಖಿಕ ಸೂಚನೆ ನೀಡಿದರೆ ಸಾಲದು. ತೆರವಿನ ಬಗ್ಗೆ ಖಾತರಿಪಡಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ತಾಲೂಕಿನಲ್ಲಿ ಸಂಭಾವ್ಯ ಅಪಾಯ ಇರುವಲ್ಲಿ ಮನೆ ಖಾಲಿ ಮಾಡುವಂತೆ ಸಂತ್ರಸ್ತರಿಗೆ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಆದರೆ ಸಂತ್ರಸ್ತರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲು ಸರಕಾರ ವಿಫಲವಾಗಿದೆ. ಮಳೆ ಯಿಂದ ಉಂಟಾಗುವ ಹಾನಿಯ ಬಗ್ಗೆ ಮಳೆಗಾಲಕ್ಕೆ ಮೊದಲೇ ಸಭೆ ನಡೆಸಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ತಂಡವನ್ನು ರಚಿಸಿ ಸಕಲ ಸಿದ್ಧತೆಗಳನ್ನು ಮಾಡಬೇಕು. ತಾಲೂಕಿನಲ್ಲಿ ಒಂದೇ ಒಂದು ಸಭೆಯೂ ನಡೆದಿಲ್ಲ. ಇದು ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಜಯಂತಿ ಪೂಜಾರಿ ಮೊದಲಾದವರು ಜೊತೆಗಿದ್ದರು.
ಪರಿಹಾರದಲ್ಲಿ ಜಿಪುಣತನ ಬೇಡ: ರೈ
ನಿರಂತರ ಮಳೆಯಿಂದ ಬಂಟ್ವಾಳ ತಾಲೂಕಿನಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು ಸಂತ್ರಸ್ತರಿಗೆ ತುರ್ತು ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದೇನೆ. ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದೇನೆ. ಹೆಚ್ಚಿನ ಭಾಗದಲ್ಲಿ ಮನೆಗಳಿಗೆ ಹಾನಿಯಾಗಿದ್ದು ಮನೆ ನಿರ್ಮಾಣ ವಸ್ತುಗಳ ಬೆಲೆ ತೀವ್ರ ಎರಿಕೆಯಾಗಿದೆ. ಅದಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು. ತೋರಿಕೆಗೆ ಪರಿಹಾರ ನೀಡಿದರೆ ಸಾಲದು. ಸರಕಾರ ಪರಿಹಾರದ ಮೊತ್ತ ಬಿಡುಗಡೆ ಮಾಡುವಾಗ ಜಿಪುಣತನ ತೋರಬಾರದು ಎಂದು ರಮಾನಾಥ ರೈ ಆಗ್ರಹಿಸಿದರು.