ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ: ಗುಜರಾತ್ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಅಹ್ಮದಾಬಾದ್,ಜು.12: ಗುಜರಾತ್ ಉಚ್ಚ ನ್ಯಾಯಾಲಯವು ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದ ಭಾಗವಾಗಿಸುವ ನಿರ್ಣಯವನ್ನು ಪ್ರಶ್ನಿಸಿ ಜಮೀಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿಗೆ ಆ.18ರೊಳಗೆ ಉತ್ತರಿಸುವಂತೆ ಸೋಮವಾರ ರಾಜ್ಯ ಸರಕಾರಕ್ಕೆ ನೋಟಿಸ್ ಹೊರಡಿಸಿದೆ.
2022-23ನೇ ಶೈಕ್ಷಣಿಕ ವರ್ಷದಿಂದ ಭಗವದ್ಗೀತೆಯು 6ರಿಂದ 12ನೇ ತರಗತಿಗಳವರೆಗೆ ಶಾಲಾ ಪಠ್ಯಕ್ರಮದ ಭಾಗವಾಗಿರುತ್ತದೆ ಎಂದು ಗುಜರಾತ್ ಸರಕಾರವು ಮೇ 17ರಂದು ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿತ್ತು. ಭಗವದ್ಗೀತೆಯನ್ನು ಆಧರಿಸಿ ಶ್ಲೋಕ ಪಠಣ ಮತ್ತು ಪ್ರಾರ್ಥನೆಗಳು, ರಸಪ್ರಶ್ನೆಗಳು, ನಾಟಕ, ಚಿತ್ರರಚನೆಯಂತಹ ಸ್ಪರ್ಧೆಗಳನ್ನು ಶಾಲೆಗಳು ನಡೆಸಲಿವೆ ಎಂದು ಶಿಕ್ಷಣ ಸಚಿವ ಜಿತು ವಘಾನಿ ತಿಳಿಸಿದ್ದರು.
ಕಾನೂನಿನ ಮುಂದೆ ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನದ 14ನೇ ವಿಧಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಗಳನ್ನು ನಿಷೇಧಿಸಿರುವ 28ನೇ ವಿಧಿಗಳನ್ನು ನಿರ್ಣಯವು ಉಲ್ಲಂಘಿಸುತ್ತದೆ ಎಂದು ತನ್ನ ಅರ್ಜಿಯಲ್ಲಿ ತಿಳಿಸಿರುವ ಜಮೀಯತ್ ಉಲಮಾ-ಎ-ಹಿಂದ್, ಭಗವದ್ಗೀತೆಯು ಹಿಂದುಗಳ ಧಾರ್ಮಿಕ ಗ್ರಂಥವಾಗಿದೆ ಮತ್ತು ಅದರಲ್ಲಿ ಹೇಳಲಾಗಿರುವ ಎಲ್ಲ ಮೌಲ್ಯಗಳು ಹಿಂದು ಧರ್ಮದ ತತ್ತ್ವಗಳೊಂದಿಗೆ ಹೆಣೆದುಕೊಂಡಿವೆ ಎನ್ನುವುದು ನಿರ್ವಿವಾದಿತ ಸತ್ಯವಾಗಿದೆ. ಆದಾಗ್ಯೂ ನಿರ್ಣಯವು ಒಂದು ಧರ್ಮಕ್ಕೆ ಇತರ ಧರ್ಮಗಳಿಗಿಂತ ಹೆಚ್ಚಿನ ಆದ್ಯತೆಯನ್ನು ನೀಡಿದೆ ಮತ್ತು ಇದು ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಒಂದು ಧರ್ಮದಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಬೋಧನೆಯು ಆ ಧರ್ಮದ ಶ್ರೇಷ್ಠತೆಯ ಬಗ್ಗೆ ಏಕಪಕ್ಷೀಯ ಸಿದ್ಧಾಂತವನ್ನು ಅವರಿಗೆ ಉಪದೇಶಿಸುತ್ತದೆ. ಇದು ಸಂವಿಧಾನದ ವಿಧಿ 21 ಮತ್ತು 25ರಡಿ ಖಾತರಿ ಪಡಿಸಲಾಗಿರುವ ಮುಕ್ತ ಆಯ್ಕೆ ಮತ್ತು ಆತ್ಮಸಾಕ್ಷಿಯ ಹಕ್ಕಿಗೆ ವಿರುದ್ಧವಾಗುತ್ತದೆ. ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯ ಜಾರಿಯ ನೆಪದಲ್ಲಿ ನಿರ್ಣಯವು ವೌಲ್ಯಗಳ ಪುಸ್ತಕವಾಗಿ ಒಂದು ಪುಸ್ತಕವನ್ನು ಆಯ್ಕೆ ಮಾಡುತ್ತದೆ ಮತ್ತು ಅದರ ಬೋಧನೆಯನ್ನು ಕಡ್ಡಾಯವಾಗಿಸುತ್ತದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.







