ಬಂಟ್ವಾಳ ; ಕಮರಿಗೆ ಉರುಳಿದ ಕಾರು: ಪ್ರಯಾಣಿಕರು ಪಾರು

ಬಂಟ್ವಾಳ, ಜು.13: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕಮರಿಗೆ ಉರುಳಿ ಮುಗುಚಿ ಬಿದ್ದ ಘಟನೆ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಘಟನೆಯಿಂದ ಬೆಳ್ತಂಗಡಿ ತಾಲೂಕಿನ ಜಾರಿಗೆ ಬೈಲು ನಿವಾಸಿಗಳಾದ ಕಾರು ಚಾಲಕ ಸಾಹಿಕ್, ಸಹ ಪ್ರಯಾಣಿಕರಾದ ಶಾಹಿನಾ, ಫೌಝಿಯಾ, ಸೌಧಾ ಮತ್ತು 6 ತಿಂಗಳ ಮಗು ಪವಾಡಸದೃಶವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರೊಬ್ಬರನ್ನು ಭೇಟಿ ಮಾಡಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಗಾಯಗೊಂಡ ಎಲ್ಲರನ್ನೂ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.