ಇರಾನ್ ನ ಪರಮಾಣು ಬಾಂಬ್ ತಡೆಯಲು ಅಮೆರಿಕ-ಇಸ್ರೇಲ್ ಒಪ್ಪಂದ

ಜೆರುಸಲೇಂ, ಜು.13: ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಪಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಮತ್ತು ಇಸ್ರೇಲ್ ಮಧ್ಯೆ ಹೊಸ ಒಪ್ಪಂದ ರೂಪುಗೊಂಡಿದ್ದು ಇದಕ್ಕೆ ಈ ವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಇಸ್ರೇಲ್ ಭೇಟಿ ಸಂದರ್ಭ ಸಹಿಬೀಳಲಿದೆ ಎಂದು ಇಸ್ರೇಲ್ ನ ಅಧಿಕಾರಿಗಳು ಹೇಳಿದ್ದಾರೆ. ಇರಾನ್ ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಆಕ್ರಮಣದ ವಿರುದ್ಧ ಜಂಟಿ ನಿಲುವಿನ ಘೋಷಣೆಯು ಈ ವಾರ ಇಸ್ರೇಲ್ಗೆ ಬೈಡನ್ ಭೇಟಿಯ ಕೇಂದ್ರ ಬಿಂದುವಾಗಿದೆ.
ಅಮೆರಿಕದ ಯಾವುದೇ ಪ್ರತಿನಿಧಿಯೊಡನೆ ಇಸ್ರೇಲ್ ನಡೆಸುವ ಮಾತುಕತೆಯಲ್ಲಿ ಇರಾನ್ ವಿಷಯಕ್ಕೆ ಪ್ರಮುಖ ಆದ್ಯತೆ ಇರುತ್ತದೆ. ಇರಾನ್ ತನ್ನ ಬಾಧ್ಯತೆಗಳನ್ನು ನಿರಂತರ ಉಲ್ಲಂಘಿಸುತ್ತಿದೆ ಮತ್ತು ಅಂತರಾಷ್ಟ್ರೀಯ ಸಮುದಾಯವನ್ನು ಮೋಸಗೊಳಿಸುವುದನ್ನು ಮುಂದುವರಿಸಿದೆ.
ಇದೀಗ 2015ರ ಪರಮಾಣು ಒಪ್ಪಂದದ ಮರುಸ್ಥಾಪನೆಯ ವಿಷಯದಲ್ಲಿ ಇರಾನ್ ಸಮಯದೊಂದಿಗೆ ಆಟವಾಡುತ್ತಿದೆ. ಸಮಯವು ತನ್ನ ಪರವಾಗಿದೆ ಎಂಬ ವಿಶ್ವಾಸ ಇರುವವರೆಗೆ ಇರಾನ್ ಯಾವುದೇ ವಿನಾಯಿತಿಗೆ ಒಪ್ಪಲಾರದು. ಈಗ ಸಮಯ ಮೀರುತ್ತಿದೆ ಮತ್ತು ಇರಾನ್ ಮೇಲೆ ಒತ್ತಡ ಹೇರಲು ಇದು ನಿರ್ಣಾಯಕ ಘಳಿಗೆಯಾಗಿದೆ ಎಂದು ಇಸ್ರೇಲ್ನ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಬೈಡನ್ ಆಡಳಿತದೊಂದಿಗಿನ ಸಹಯೋಗ ಬಲಿಷ್ಟವಾಗಿದೆ ಮತ್ತು ಅವರ ಭೇಟಿಯ ಸಂದರ್ಭ ಇದನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಹೊಸ ಜಂಟಿ ಘೋಷಣೆಯು ಅಮೆರಿಕ-ಇಸ್ರೇಲ್ ನಡುವಿನ ಸಂಬಂಧದ ಅನನ್ಯ ಗುಣಮಟ್ಟ, ಆಳ ಮತ್ತು ವ್ಯಾಪ್ತಿಗೆ ಜೀವಂತ ಸಾಕ್ಷಿಯಾಗಿದೆ.
ಇದು ಎರಡೂ ಕಡೆಯ ಸಂಬಂಧಕ್ಕೆ, ನಿರ್ದಿಷ್ಟವಾಗಿ ಇಸ್ರೇಲ್ನ ಭದ್ರತೆ, ಸಮೃದ್ಧಿ ಮತ್ತು ಯೋಗಕ್ಷೇಮದ ಕುರಿತು ಹಾರ್ದಿಕ ಮತ್ತು ಆಳವಾದ ಭದ್ರತೆಯನ್ನು ತೋರಿಸುತ್ತದೆ ಎಂದು ಇಸ್ರೇಲ್ನ ರಾಜತಾಂತ್ರಿಕ ಮೂಲಗಳು ಹೇಳಿವೆ. ಇಸ್ರೇಲ್ನಿಂದ ಸೌದಿ ಅರೆಬಿಯಾಕ್ಕೆ ಪ್ರಯಾಣ ಬೆಳೆಸುವ ಮುನ್ನ ಬೈಡನ್ ಪೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ರನ್ನು ಬೆಥ್ಲಹೇಮ್ನಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ.
ಬಳಿಕ ಪೂರ್ವ ಜೆರುಸಲೇಂನಲ್ಲಿರುವ ಪೆಲೆಸ್ತೀನ್ ಆಸ್ಪತ್ರೆ ಆಗಸ್ಟಾ ವಿಕ್ಟೋರಿಯಾಕ್ಕೆ ಭೇಟಿ ನೀಡಿ, ಆಸ್ಪತ್ರೆಗೆ ಅಮೆರಿಕದ ನೆರವನ್ನು ಮರುಸ್ಥಾಪಿಸುವ ಘೋಷಣೆ ಮಾಡಲಿದ್ದಾರೆ. ಈ ಸಂದರ್ಭ ಇಸ್ರೇಲ್ ಅಧಿಕಾರಿಗಳು ಅಮೆರಿಕದ ನಿಯೋಗದ ಜತೆ ತೆರಳಲು ಅವಕಾಶ ನಿರಾಕರಿಸಿರುವುದು ಈ ಪ್ರದೇಶ ಇಸ್ರೇಲ್ ನ ಭಾಗವಲ್ಲ ಎಂದು ಅಮೆರಿಕ ಪರಿಗಣಿಸಿರುವುದರ ದ್ಯೋತಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.