ಟ್ಯಾಕ್ಸಿ ಚಾಲಕರಿಗೆ ಸಮವಸ್ತ್ರ: ಸೌದಿಯಲ್ಲಿ ಹೊಸ ನಿಯಮ ಜಾರಿಗೆ

ಜೆಡ್ಡಾ, ಜು.13: ಟ್ಯಾಕ್ಸಿ ಚಾಲಕರು ಸಮವಸ್ತ್ರ ಧರಿಸಬೇಕು ಎಂಬ ನೂತನ ನಿಯಮ ಜುಲೈ 12ರಿಂದ ಜಾರಿಗೆ ಬಂದಿರುವುದಾಗಿ ಸೌದಿ ಅರೆಬಿಯಾದ ಸಾರಿಗೆ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಮೇ ತಿಂಗಳಿನಲ್ಲಿ ಘೋಷಿಸಲಾದ ಈ ಹೊಸ ನಿಯಮವು ಖಾಸಗಿ ಬಾಡಿಗೆ ವಾಹನ ಸೇರಿದಂತೆ ಎಲ್ಲಾ ರೀತಿಯ ಟ್ಯಾಕ್ಸಿ ಹಾಗೂ ಬಾಡಿಗೆ ಸೇವೆಯ ವಾಹನಗಳ ಪುರುಷ ಮತ್ತು ಮಹಿಳಾ ಚಾಲಕಿಯರಿಗೆ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು. ಪುರುಷರು ರಾಷ್ಟ್ರೀಯ ಉಡುಗೆ ಅಥವಾ ಉದ್ದ ತೋಳಿನ ಬೂದು ಅಂಗಿ, ಕಪ್ಪು ಪ್ಯಾಂಟ್ ಮತ್ತು ಕಪ್ಪು ಬೆಲ್ಟ್ ಧರಿಸಬೇಕು. ಅಗತ್ಯಬಿದ್ದರೆ ಜಾಕೆಟ್ ಧರಿಸಬಹುದು. ಮಹಿಳೆಯರು ಕುಪ್ಪಸ ಮತ್ತು ಪಾಯಿಜಾಮ, ಜಾಕೆಟ್ ಅಥವಾ ಕೋಟ್ ಧರಿಸಬೇಕು. ಎಲ್ಲಾ ಚಾಲಕರೂ ತಮ್ಮ ಗುರುತು ಚೀಟಿಗಳನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್ಸೈಟ್ಗೆ ಭೇಟಿ ನೀಡಬಹುದು. ಚಾಲಕರು ಸಮವಸ್ತ್ರ ಧರಿಸಿರದಿದ್ದರೆ ಪ್ರಯಾಣಿಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
Next Story





