ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ತೆರಿಗೆ; ಜು.15-16ರಂದು ಅಕ್ಕಿ ಗಿರಾಣಿ, ಆಹಾರ ಧಾನ್ಯ ಮಾರಾಟ ಬಂದ್
ಉಡುಪಿ: ಆಹಾರ ಧಾನ್ಯಗಳ ಮೇಲೆ ಶೇ.೫ರಷ್ಟು ತೆರಿಗೆ ವಿಧಿಸಿ ರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ಅಕ್ಕಿ ಗಿರಣಿ ದಾರರ ಸಂಘವು ಆಹಾರ ಧಾನ್ಯಗಳ ವರ್ತಕ ಸಂಘ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಗಳ ಸಹಕಾರದೊಂದಿಗೆ ಜು.15 ಮತ್ತು 16ರಂದು ಎಲ್ಲ ವ್ಯಾಪಾರ ಉದ್ಯಮದ ವಹಿವಾಟುಗಳನ್ನು ಬಂದ್ ಮಾಡಲು ನಿರ್ಧರಿಸಿದೆ.
ಇತ್ತೀಚೆಗೆ ಕೇಂದ್ರ ಸರಕಾರದ ಜಿಎಸ್‌ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ಶೇ.೫ರಷ್ಟು ತೆರಿಗೆಯನ್ನು ವಿಧಿಸಿದ್ದು, ಇದು ದೇಶಾದ್ಯಂತ ಜು.೧೮ರಿಂದ ಜಾರಿಗೆ ಬರಲಿದೆ. ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಮುಂತಾದವು ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳ ಮೇಲಿನ ತೆರಿಗೆಯಿಂದ ಜನ ಸಾಮಾನ್ಯರ ಜೀವನ ವೆಚ್ಚ ಜಾಸ್ತಿಯಾಗುತ್ತದೆ. ಆದ್ದರಿಂದ ಈ ತೆರಿಗೆಯನ್ನು ತೆಗೆದು ಹಾಕುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಆದರೆ ಸರಕಾರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಕೇಂದ್ರ ಸರಕಾರದ ತೆರಿಗೆ ಇಲಾಖೆ ಕೂಡ ಯಾವುದೇ ಸ್ಪಷ್ಟೀಕರಣ ಮತ್ತು ಪ್ರಕಟಣೆ ಹೊರಡಿಸಿಲ್ಲ. ಇದನ್ನು ಖಂಡಿಸಿ ಪ್ರತಿಭಟಿಸಲು ನಮ್ಮ ಎಲ್ಲ ವ್ಯಾಪಾರ ಉದ್ಯಮದ ವಹಿವಾಟುಗಳನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಅಲ್ಲದೆ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ತೆರಿಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿ ನಿಧಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ರಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.