‘ಅಗ್ನಿಪಥ್’ ಪ್ರಶ್ನಿಸಿ ಮನವಿ: ಸುಪ್ರೀಂನಲ್ಲಿ ಜು. 15ರಂದು ವಿಚಾರಣೆ

ಹೊಸದಿಲ್ಲಿ, ಜು. 13: ರಕ್ಷಣಾ ಪಡೆಗಳಿಗೆ ತಾತ್ಕಾಲಿಕ ನೇಮಕಾತಿ ಯೋಜನೆ ‘ಅಗ್ನಿಪಥ್’ ಪ್ರಶ್ನಿಸಿ ಸಲ್ಲಿಸಿದ ಮನವಿಗಳನ್ನು ಸುಪ್ರೀಂ ಕೋರ್ಟ್ ಜುಲೈ 15ರಂದು ವಿಚಾರಣೆ ನಡೆಸಲಿದೆ.
‘ಅಗ್ನಿಪಥ್’ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಮನವಿಗಳನ್ನು ಸಲ್ಲಿಸಲಾಗಿದೆ. ಈ ಮನವಿಗಳನ್ನು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಲಿದೆ. ‘ಅಗ್ನಿಪಥ್’ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮನವಿಗಳ ಕುರಿತಂತೆ ಸರಕಾರದ ಆಲಿಕೆ ನಡೆಸುವಂತೆ ಆಗ್ರಹಿಸಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಅರ್ಜಿ ಸಲ್ಲಿಸಿದೆ.
ಆಲಿಕೆ ನಡೆಸದೆ ಆತ ಅಥವಾ ಆಕೆಯ ವಿರುದ್ಧ ಪ್ರತಿಕೂಲ ಆದೇಶ ನೀಡುವುದಿಲ್ಲ ಎಂಬುದನ್ನು ಖಾತರಿಪಡಿಸಲು ಕಕ್ಷಿದಾರರು ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.
‘ಅಗ್ನಿಪಥ್’ ಅನ್ನು ಮರು ಪರಿಶೀಲಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯವಾದಿ ಹರ್ಷ ಅಜಯ್ ಸಿಂಗ್ ಅವರು ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಾರೆ.
‘ಅಗ್ನಿಪಥ್’ಯೋಜನೆ ಘೋಷಣೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು. ನಾಲ್ಕು ವರ್ಷಗಳ ಅಲ್ಪಾವಧಿ ಹಾಗೂ ತರಬೇತು ಪಡೆದ ‘ಅಗ್ನಿವೀರ’ರ ಅನಿಶ್ಚಿತತೆ ಹಿನ್ನೆಲೆಯಲ್ಲಿ ಬಿಹಾರ್, ಉತ್ತರಪ್ರದೇಶ, ತೆಲಂಗಾಣ, ಹರ್ಯಾಣ, ಉತ್ತರಾಖಂಡ, ಪಶ್ಚಿಮಬಂಗಾಳ ಹಾಗೂ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿತ್ತು.
‘ಅಗ್ನಿಪಥ್’ ಯೋಜನೆ ಕಾನೂನು ಬಾಹಿರ ಹಾಗೂ ಅಸಂವಿಧಾನಿಕ. ಆದುದರಿಂದ ಕೇಂದ್ರ ಸರಕಾರದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ನ್ಯಾಯವಾದಿ ಎಂ.ಎಲ್. ಶರ್ಮಾ ಆಗ್ರಹಿಸಿದ್ದರು.