ಸುಸ್ಥಿದಾರ ರೈತರ ಸಾಲ ಮನ್ನಾಕ್ಕೆ ಬಿಡುಗಡೆಯಾದ ಹಣ ದುರುಪಯೋಗ: ರೈತಸಂಘ ಆರೋಪ
ಚಿಕ್ಕಮಗಳೂರು, ಜು.13: ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಕಳೆದ 24 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿವ ಸಹಕಾರಿ ಬ್ಯಾಂಕ್‍ನಿಂದ ಸಾಲ ಪಡೆದು ಸುಸ್ಥಿದಾರರಾಗಿದ್ದ 28 ರೈತರ ಸಾಲವನ್ನು ಕೇಂದ್ರ ಮನ್ನಾ ಮಾಡಿದ್ದು, ಸಾಲ ಮನ್ನಾ ಯೋಜನೆಯಡಿ ಬ್ಯಾಂಕ್‍ಗೆ 14,23757 ರೂ. ಹಣ ಬಂದಿದೆ. ಆದರೆ ಇದನ್ನು ಬ್ಯಾಂಕ್‍ನ ವ್ಯವಸ್ಥಾಪಕರು ಫಲಾನುಭವಿ ರೈತರ ಗಮನಕ್ಕೆ ತಾರದೇ ಇಬ್ಬರು ರೈತರ ಸಾಲ ಮನ್ನಾ ಮಾಡದೇ ವಂಚಿಸಿರುವುದು ಬೆಳಕಿಗೆ ಬಂದಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು ವಂಚನೆಗೊಳಗಾದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಆರೋಪಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರೀಕೆರೆ ಪಟ್ಟಣದಲ್ಲಿರುವ ಶಿವ ಸಹಕಾರಿ ಬ್ಯಾಂಕ್‍ನಿಂದ ತಾಲೂಕಿನ ನೂರಾರು ರೈತರು ಸಾಲ ಪಡೆದುಕೊಂಡಿದ್ದು, ಈ ಪೈಕಿ 28 ರೈತರು ವಿವಿಧ ಉದ್ದೇಶಕ್ಕೆ ಬ್ಯಾಂಕ್‍ನಿಂದ ಸಾಲ ಪಡೆದು ಸುಸ್ಥಿದಾರರಾಗಿದ್ದಾರೆ. ಸುಸ್ಥಿದಾರರಾಗಿದ್ದ 28 ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರದ ಸಾಲ ಮನ್ನಾ ಯೋಜನೆಯಡಿಯಲ್ಲಿ ಬ್ಯಾಂಕ್‍ಗೆ 2009-10ನೇ ಸಾಲಿನಲ್ಲಿ 14,23,757 ಲಕ್ಷ ರೂ. ಹಣ ಬಂದಿದೆ. ಆದರೆ 28 ರೈತರ ಪೈಕಿ ತರೀಕೆರೆ ಪಟ್ಟಣದ ವಿನಾಯಕ ನಗರದ ನಿವಾಸಿ ಜಗನ್ನಾಥ್ ಎಂಬವರಿಗೆ ಕೇಂದ್ರದ ಸಾಲ ಮನ್ನಾ ಯೋಜನೆಯಡಿಯಲ್ಲಿ 2,75000 ರೂ. ಹಣ ಬಂದಿದ್ದರೇ, ತಾಲೂಕಿನ ಅಮೃತಾಪುರ ಹೋಬಳಿಯ ಹಾದಿಕೆರೆ ನಿವಾಸಿ ಚಿದಾನಂದ್ ಎಂಬವರಿಗೆ 53 ಸಾವಿರ ರೂ. ಹಣ ಬಂದಿದೆ. ಆದರೆ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಎಂಬವರು ಸಾಲ ಮನ್ನಾ ಯೋಜನೆಯ ಫಲಾನುಭವಿಗಳಾದ ಜಗನ್ನಾಥ್ ಹಾಗೂ ಚಿದಾನಂದ್ ಎಂಬವರಿಗೆ ಈ ಬಗ್ಗೆ ಮಾಹಿತಿ ನೀಡದೇ ಹೆಚ್ಚುವರಿ ಹಣ ಕಟ್ಟಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಈ ರೈತರ ಸಾಲ ಮನ್ನಾ ಬ್ಯಾಂಕ್‍ಗೆ ಹಣ ವರ್ಗಾವಣೆ ಮಾಡಿದ್ದರೂ ಬ್ಯಾಂಕ್‍ನ ವ್ಯವಸ್ಥಾಪಕರು ಆರ್‍ಬಿಐನ ಮಾನದಂಡಗಳಂತೆ ರೈತರಿಗೆ ಮಾಹಿತಿ ನೀಡದೇ ವಂಚಿಸಿದ್ದಾರೆ. ಸಾಲ ಮನ್ನಾ ಆಗಿದ್ದರೂ ಜಗನ್ನಾಥ್ ಅವರಿಂದ 2017ರವರೆಗೆ 9,50,000 ರೂ, ಹಣವನ್ನು ಬ್ಯಾಂಕ್‍ಗೆ ಕಟ್ಟಿಸಿಕೊಂಡಿದ್ದು, ಈ ರೈತನಿಗೆ ಸಾಲ ಮನ್ನಾ ಹಣ ಹಾಗೂ ಬ್ಯಾಂಕ್ ರೈತರ ಹಣಕ್ಕೆ ನೀಡುವ ಬಡ್ಡಿ ಸೇರಿ 36 ಲಕ್ಷ ರೂ. ಹಿಂದಿರುಗಿಸಬೇಕಿದೆ. ಅದೇ ರೀತಿ ಚಿದಾನಂದ್ ಅವರಿಗೆ 2,85000 ಹಣವನ್ನು ಬ್ಯಾಂಕ್ ಹಿಂದಿರುಗಿಸಬೇಕಿದೆ. ಆದರೆ ಬ್ಯಾಂಕ್‍ನ ವ್ಯವಸ್ಥಾಪಕರು ಇಲ್ಲದ ಸಬೂಬು ಹೇಳುತ್ತಾ ಪೂರ್ಣ ಹಣ ಹಿಂದಿರುಗಿಸದೇ ವಂಚನೆ ಮಾಡಿದ್ದಾರೆ. ಈ ಸಂಬಂಧ ಬ್ಯಾಂಕ್‍ನ ಅಧ್ಯಕ್ಷರು ಹಾಗೂ ನಿರ್ದೇಶಕರು ಸೇರಿದಂತೆ ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲಾ ಸಹಕಾರಿ ನಿಬಂಧಕರು ಹಾಗೂ ಸಹಕಾರಿ ಇಲಾಖಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದರು.
ಈ ಇಬ್ಬರು ರೈತರು ನೀಡಿದ್ದ ದೂರಿನ ಮೇರೆಗೆ ಬ್ಯಾಂಕ್‍ನಲ್ಲಿ ವಿಚಾರಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಬಾಕಿ 26 ಮಂದಿ ಸುಸ್ಥಿದಾರರಿಗೂ ಕೇಂದ್ರದ ಸಾಲ ಮನ್ನಾ ಯೋಜನೆಯಡಿ ಕೇಂದ್ರದಿಂದ ಬ್ಯಾಂಕ್‍ಗೆ ಹಣ ಬಂದಿದ್ದು, ಈ ಹಣ ರೈತರ ಖಾತೆಗೆ ಜಮಾ ಆಗಿದೆಯೋ ಇಲ್ಲವೂ ಎಂಬುದು ತಿಳಿದು ಬಂದಿಲ್ಲ. ಜಿಲ್ಲಾಧಿಕಾರಿ ಈ ಸಂಬಂಧ ತನಿಕೆ ಕೈಗೊಂಡು ನೊಂದ ರೈತರಿಗೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಬ್ಯಾಂಕ್‍ನ ಎದುರು ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ದುಗ್ಗಪ್ಪಗೌಡ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನಿಂದ ವಂಚನೆಗೊಳಗಾದ ರೈತರಾದ ಚಿದಾನಂದ್, ಜಗನ್ನಾಥ್ ಸೇರಿದಂತೆ ರೈತಸಂಘದ ಮುಖಂಡರಾದ ತರೀಕರೆ ಮಹೇಶ್, ಹುಣಸೇಗೌಡ, ಶಂಕರಪ್ಪ, ಮಂಜೇಗೌಡ, ಬಸವರಾಜಪ್ಪ ಉಪಸ್ಥಿತರಿದ್ದರು.







