ರಾಜಪಕ್ಸಗೆ ಆಶ್ರಯ: ಮಾಲ್ದೀವ್ ಸರಕಾರದ ನಿರ್ಧಾರಕ್ಕೆ ಹಲವರ ವಿರೋಧ

ಹೊಸದಿಲ್ಲಿ, ಜು.13: ಶ್ರೀಲಂಕಾದ ಅಧ್ಯಕ್ಷ ಗೊತಬಯ ರಾಜಪಕ್ಸಗೆ ಆಶ್ರಯ ಕಲ್ಪಿಸಿದ ಮಾಲ್ದೀವ್ ಸರಕಾರದ ನಿರ್ಧಾರಕ್ಕೆ ದೇಶದೊಳಗೆಯೇ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿ ರಾಜಪಕ್ಸ ತನ್ನ ಪತ್ನಿ ಮತ್ತು ಇಬ್ಬರು ಭದ್ರತಾ ಸಿಬಂದಿಯ ಜತೆ ಮಾಲ್ದೀವ್ಸ್ ತಲುಪಿದ್ದಾರೆ ಎಂದು ವರದಿಯಾಗಿತ್ತು.
ಶ್ರೀಲಂಕಾದ ವಾಯುಪಡೆಯ ವಿಮಾನದ ಮೂಲಕ ಅವರು ಶ್ರೀಲಂಕಾದಿಂದ ತೆರಳಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿತ್ತು. ಬುಧವಾರ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಗೊತಬಯ ಕಳೆದ ರವಿವಾರ ಘೋಷಿಸಿದ್ದರು. ರಾಜೀನಾಮೆ ನೀಡಿದರೆ ಅವರಿಗೆ ದೊರಕುತ್ತಿದ್ದ ಸರಕಾರಿ ಭದ್ರತೆ ಮತ್ತು ಬಂಧನದಿಂದ ವಿನಾಯತಿಯ ಸವಲತ್ತು ರದ್ದಾಗುವುದರಿಂದ ಸ್ವರಕ್ಷಣೆಗಾಗಿ ಅವರು ಮಾಲ್ದೀವ್ಸ್ಗೆ ಪಲಾಯನ ಮಾಡಿದ್ದಾರೆ ಎಂದು ವರದಿ ಹೇಳಿದೆ.
ಗೊತಬಯ ಈಗ ದಕ್ಷಿಣ ಮಾಲೆಯ ಇಥಾಫ್ಯುಶಿ ದ್ವೀಪದಲ್ಲಿ ನೆಲೆಸಿದ್ದಾರೆ. ಅವರು ಎಷ್ಟು ದಿನ ಅಲ್ಲಿರುತ್ತಾರೆ ಎಂಬ ಮಾಹಿತಿಯಿಲ್ಲ. ಆದರೆ ಅವರು ಶೀಘ್ರವೇ ಸಿಂಗಾಪುರಕ್ಕೆ ತೆರಳಲು ಯೋಜಿಸಿದ್ದಾರೆ ಎಂದು ಶ್ರೀಲಂಕಾದ ತಮಿಳು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಗೊತಬಯ ಪ್ರಯಾಣಿಸಿದ್ದ ವಿಮಾನಕ್ಕೆ ಮಾಲ್ದೀವ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಆರಂಭದಲ್ಲಿ ನಿಲ್ದಾಣದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು. ಆದರೆ ಮಾಲ್ದೀವ್ನ ಸ್ಪೀಕರ್ ಮತ್ತು ಮಾಜಿ ಅಧ್ಯಕ್ಷ ಮುಹಮ್ಮದ್ ನಾಶೀದ್ ಅವರು ಮಧ್ಯಪ್ರವೇಶಿಸಿ ವಿಮಾನ ಇಳಿಯಲು ಅನುಮತಿ ನೀಡುವಂತೆ ಸೂಚಿಸಿದ್ದರು ಎಂದು ಸಿಎನ್ಎನ್ ವರದಿ ಮಾಡಿದೆ.