ರಾಜಪಕ್ಸ ಸಹೋದರರಲ್ಲಿ ದೂರದೃಷ್ಟಿಯ ಕೊರತೆಯಿತ್ತು : ನಾರ್ವೆ ರಾಜತಂತ್ರಜ್ಞರ ಅಭಿಮತ

ಕೊಲಂಬೊ, ಜು.13: ಶ್ರೀಲಂಕಾ ರಾಜಕೀಯದಲ್ಲಿ ಪ್ರಮುಖ ಶಕ್ತಿಯಾಗಿರುವ ರಾಜಪಕ್ಸ ಸಹೋದರರಲ್ಲಿ ದೂರದೃಷ್ಟಿಯ ಕೊರತೆಯಿತ್ತು ಮತ್ತು ಅವರು ರಾಜಕೀಯವನ್ನು ತಮ್ಮ ಹಿತಸಾಧನೆಗಾಗಿ ಬಳಸಿಕೊಂಡರು ಎಂದು ನಾರ್ವೆಯ ರಾಜತಂತ್ರಜ್ಞ ಎರಿಕ್ ಸೊಲ್ಹೀಮ್ ಹೇಳಿದ್ದಾರೆ.
ಎಲ್ಟಿಟಿಇ- ಶ್ರೀಲಂಕಾ ಸರಕಾರದ ನಡುವಿನ ಅಂತರ್ಯುದ್ಧದ ಸಂದರ್ಭ ಸೊಲ್ಹೀಮ್ ಅಂತರಾಷ್ಟ್ರೀಯ ಶಾಂತಿ ಮಾತುಕತೆಯ ನಿಯೋಗದಲ್ಲಿದ್ದರು. ಶ್ರೀಲಂಕಾದ ರಾಜಕೀಯದ ಬಗ್ಗೆ ಆಳವಾದ ಮಾಹಿತಿ ಹೊಂದಿರುವ ಸೊಲ್ಹೀಮ್ ಪ್ರಕಾರ, ಗೊತಬಯ ರಾಜಪಕ್ಸರ ಪದಚ್ಯುತಿಯು ಎಡಪಂಥೀಯ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಪಕ್ಷಕ್ಕೆ ಲಾಭವಾಗಲಿದೆ. ಆದರೆ,
ನೂತನ ಅಧ್ಯಕ್ಷರು ತಮಿಳ್ ನ್ಯಾಷನಲ್ ಅಲಯನ್ಸ್ (ಟಿಎನ್ಎ) ಪಕ್ಷದೊಂದಿಗೆ ಸಂಪರ್ಕ ಸಾಧಿಸಿ ದ್ವೀಪರಾಷ್ಟ್ರದಲ್ಲಿರುವ ಜನಾಂಗೀಯ ವಿಭಜನೆಯನ್ನು ನಿವಾರಿಸಿದರೆ ದೇಶಕ್ಕೆ ಒಳಿತಾಗಲಿದೆ ಎಂದವರು ಹೇಳಿದ್ದಾರೆ. ಎಲ್ಟಿಟಿಇ-ಶ್ರೀಲಂಕಾ ಸರಕಾರದ ನಡುವಿನ ಸಂಘರ್ಷಕ್ಕೆ ಅಂತ್ಯ ಹೇಳುವ ಉದ್ದೇಶದ ಶಾಂತಿ ಮಾತುಕತೆ ಸಂದರ್ಭ ಅವರು 50ಕ್ಕೂ ಅಧಿಕ ಬಾರಿ ಶ್ರೀಲಂಕಾಕ್ಕೆ ಭೇಟಿ ನೀಡಿ ವಿವಿಧ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಶಾಂತಿ ಮಾತುಕತೆ ವಿಫಲವಾಗಿತ್ತು. ಎಲ್ಟಿಟಿಇ ಹಾಗೂ ಶ್ರೀಲಂಕಾ ಸರಕಾರ ಸಂಧಾನ ನಡೆಸಿ ಗಣರಾಜ್ಯ ವ್ಯವಸ್ಥೆಗೆ ಮುಂದಾಗಬೇಕಿತ್ತು.
ಭಾರತ ಗಣರಾಜ್ಯ ವ್ಯವಸ್ಥೆಯಡಿ ಇದೆ. ಅದರಿಂದ ದೇಶದ ಭದ್ರತೆಗೆ ಧಕ್ಕೆಯಾಗಿಲ್ಲ. ಅದೇ ರೀತಿ ಶ್ರೀಲಂಕಾವೂ ಬಲಿಷ್ಟವಾಗುತ್ತಿತ್ತು. ಆದರೆ ತನ್ನ ಪ್ರಸ್ತಾವನೆಯನ್ನು ಎರಡೂ ಕಡೆಯವರು ತಿರಸ್ಕರಿಸಿದರು ಎಂದು ಸೊಲ್ಹೀಮ್ ಹೇಳಿದ್ದಾರೆ. ರಾಜಪಕ್ಸ ಸೋದರರನ್ನು ಹಲವು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಆಗ ಮಹಿಂದಾ ಅಧ್ಯಕ್ಷರಾಗಿದ್ದರು,
ಗೊತಬಯ ರಕ್ಷಣಾ ಕಾರ್ಯದರ್ಶಿಯಾಗಿದ್ದರು. ಆದರೆ ಇಬ್ಬರಲ್ಲೂ ದೂರದೃಷ್ಟಿಯ ಕೊರತೆ ಸ್ಪಷ್ಟವಾಗಿ ಕಾಣುತ್ತಿತ್ತು. ಇಬ್ಬರಲ್ಲೂ ಶ್ರೀಲಂಕಾದ ಬಗ್ಗೆ ವ್ಯಾಪಕ ದೂರದೃಷ್ಟಿ ಇರಲಿಲ್ಲ. ತಮಿಳು ಅಥವಾ ಮುಸ್ಲಿಂ ದೃಷ್ಟಿಕೋನದಿಂದ ಶ್ರೀಲಂಕಾ ಹೇಗೆ ಕಾಣುತ್ತದೆ ಎಂಬುದನ್ನು ಪರಿಗಣಿಸಲು ಅವರು ಸಮಯ ನೀಡಲಿಲ್ಲ. ಉದಾಹರಣೆಗೆ, ಸಿಂಗಾಪುರದಂತೆ ರಾಷ್ಟ್ರವನ್ನು ಸಮೃದ್ಧಿಯತ್ತ ಕೊಂಡೊಯ್ಯುವ ಯಾವುದೇ ಆರ್ಥಿಕ ನೀತಿಯನ್ನು ಅವರು ಹೊಂದಿರಲಿಲ್ಲ. ಅವರು ಸಿಂಹಳೀಯ ರಾಷ್ಟ್ರೀಯತಾವಾದಿಗಳು. ಜೊತೆಗೆ, ತಮ್ಮ ಹಿತಾಸಕ್ತಿಗಾಗಿ ರಾಜಕೀಯ ಮಾಡುವವರು.
ನಾಲ್ವರು ಸಹೋದರರಿಂದ ಸಂಪೂರ್ಣ ನಿಯಂತ್ರಿಸಲ್ಪಡುವ 22 ಮಿಲಿಯನ್ ಜನಸಂಖ್ಯೆಯ ದೇಶವನ್ನು ಬೇರೆಲ್ಲಾದರೂ ನೋಡಲು ಸಾಧ್ಯವೇ ಎಂದವರು ಪ್ರಶ್ನಿಸಿದ್ದಾರೆ. 2009ರಲ್ಲಿ ಎಲ್ಟಿಟಿಯನ್ನು ದಮನಿಸಿದ ಬಳಿಕ, ರಾಜಪಕ್ಸ ಸಹೋದರರನ್ನು ಸಿಂಹಳೀಯ ಸಮುದಾಯದ ರಕ್ಷಕರು ಎಂದು ಪರಿಗಣಿಸಲಾಯಿತು ಮತ್ತು ಇದು ಭಾರೀ ಬಹುಮತದೊಂದಿಗೆ ಅವರ ಆಯ್ಕೆಗೆ ಕಾರಣವಾಯಿತು. ಆದರೆ ಅವರು ಎಲ್ಲಾ ಬೆಂಬಲ, ಅನುಕಂಪವನ್ನು ವ್ಯರ್ಥಗೊಳಿಸಿದರು ಮತ್ತು ಶ್ರೀಲಂಕಾದ ಜನತೆ ಕುಟುಂಬ ರಾಜವಂಶವನ್ನು ತೊಡೆದುಹಾಕಲು ನಿರ್ಧರಿಸಿದರು. ಇದೆಲ್ಲಾ ಇಷ್ಟು ವೇಗವಾಗಿ ನಡೆಯುತ್ತದೆ ಎಂದು ನಾನೆಂದೂ ಊಹಿಸಿರಲಿಲ್ಲ ಎಂದು ಸೊಲ್ಹೀಮ್ ಹೇಳಿದ್ದಾರೆ.





