ಸನ್ನಡತೆ ಆಧಾರದ ಮೇಲೆ 84 ಖೈದಿಗಳ ಬಿಡುಗಡೆ

ಬೆಂಗಳೂರು, ಜು.13: 75ನೆ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸುಮಾರು 84 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲುರಾಜ್ಯ ಸರಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು, ಬಳ್ಳಾರಿ, ಬೆಳಗಾವಿ, ಶಿವಮೊಗ್ಗ, ದಾವಣೆಗೆರೆ, ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಒಟ್ಟು 15 ಸಾವಿರಕ್ಕೂ ಹೆಚ್ಚು ಖೈದಿಗಳು ಜೀವಾವಧಿ, 1 ವರ್ಷ, 2 ವರ್ಷ, 3 ವರ್ಷ ಹೀಗೆ ವಿವಿಧ ರೀತಿ ಶಿಕ್ಷೆಗೊಳಪಟ್ಟಿದ್ದಾರೆ.
ಪ್ರತಿ ವರ್ಷ ಆ.15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಪಟ್ಟಿರುವ ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವುದು ಸಂಪ್ರದಾಯವಾಗಿದೆ. ಅದರಂತೆ ಈ ಬಾರಿ ಮೊದಲ ಹಂತದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 84 ಖೈದಿಗಳನ್ನು ರಾಜ್ಯಕಾರಾಗೃಹ ಇಲಾಖೆ ಗುರುತಿಸಿದೆ.
ನಾಲ್ಕು ಮಹಿಳಾ ಕೈದಿಗಳು ಸೇರಿದಂತೆ ಗುರುತಿಸಲಾದ 84 ಖೈದಿಗಳು ಗೃಹ ಇಲಾಖೆ ನಿಗದಿಪಡಿಸಿದ ಮಾನದಂಡಕ್ಕೆ ಒಳಪಡುತ್ತಾರೆ. 84 ರಲ್ಲಿ, 81 ಖೈದಿಗಳು ತಮ್ಮ ಅವಧಿಯ ಮೂರನೇ ಎರಡರಷ್ಟು ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಮುಂದಿನ 15 ದಿನಗಳಲ್ಲಿ ಅವರ ಹೆಸರುಗಳು ಮತ್ತು ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.





