ಬ್ರಿಟನ್ ಪ್ರಧಾನಿ ಹುದ್ದೆ ರೇಸ್: ರಿಷಿ ಸುನಾಕ್ ಮುನ್ನಡೆ

ರಿಷಿ ಸುನಾಕ್ (Photo: AP/PTI)
ಲಂಡನ್, ಜು.14: ಬ್ರಿಟನ್ನ ಮುಂದಿನ ಪ್ರಧಾನಿಯನ್ನು ನಿರ್ಧರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಮಾಜಿ ವಿತ್ತಸಚಿವ, ಭಾರತೀಯ ಮೂಲದ ರಿಷಿ ಸುನಾಕ್ ಮುನ್ನಡೆ ಸಾಧಿಸಿದ್ದಾರೆ. ಪ್ರಥಮ ಸುತ್ತಿನ ಮತದಾನದಲ್ಲಿ 42 ವರ್ಷದ ಸುನಾಕ್ 88 ಮತಗಳಿಂದ ಅಗ್ರಸ್ಥಾನದಲ್ಲಿದ್ದಾರೆ.
ಜತೆಗೆ 18 ಮತಗಳಿಂದ ಅಂತಿಮ ಸ್ಥಾನ ಪಡೆದ ಮಾಜಿ ಸಚಿವ ಜೆರೆಮಿ ಹಂಟ್ ಅವರ ಬೆಂಬಲವನ್ನೂ ಪಡೆದಿದ್ದಾರೆ. ಮಾಜಿ ಸಚಿವರಾದ ಪೆನ್ನಿ ಮೊರ್ಡೌಂಟ್ 67 ಮತ, ಲಿರ್ ಟ್ರೂಸ್ 50 ಮತ, ಕೆಮಿ ಬಡೆನೋಚ್ 40 ಮತ, ಸಂಸದರಾದ ಟಾಮ್ ಟುಗೆಂಡಟ್ 37 ಮತ, ಸುಯೆಲ್ಲಾ ಬ್ರೇವರ್ಮನ್ 32 ಮತ, ಜೆರೆಮಿ ಹಂಟ್ 18 ಮತ ಪಡೆದಿದ್ದಾರೆ.
ಕನಿಷ್ಟ ಮತ ಪಡೆದವರು 2ನೇ ಸುತ್ತಿನಿಂದ ಹೊರಬೀಳುತ್ತಾರೆ. ಪ್ರಥಮ ಸುತ್ತಿನ ಮತದಾನದ ಬಳಿಕ ಬಿಬಿಸಿ ಜತೆಗಿನ ಸಂದರ್ಶನದಲ್ಲಿ ಸುನಾಕ್, ತಮ್ಮ ತೆರಿಗೆ ನೀತಿಯನ್ನು ಟೀಕಿಸುತ್ತಿರುವ ವಿರೋಧಿಗಳಿಗೆ ಸೂಕ್ತ ಉತ್ತರ ನೀಡಿದ್ದಾರೆ. ನಾನು ಈ ಸಂಸತ್ತಿನಲ್ಲಿ ತೆರಿಗೆಯನ್ನು ಇಳಿಸಲಿದ್ದೇನೆ, ಆದರೆ ಅದನ್ನು ಜವಾಬ್ದಾರಿಯಿಂದ ಮಾಡುತ್ತೇನೆ.
ನಾನು ಚುನಾವಣೆ ಗೆಲ್ಲಲು ತೆರಿಗೆ ಕಡಿತಗೊಳಿಸುವುದಿಲ್ಲ, ತೆರಿಗೆ ಕಡಿತಗೊಳಿಸಲು ಚುನಾವಣೆ ಗೆಲ್ಲುತ್ತೇನೆ. ನಮ್ಮ ಪ್ರಥಮ ಆದ್ಯತೆ ಆರ್ಥಿಕತೆಯನ್ನು ಬಲಪಡಿಸುವುದು, ಅದನ್ನು ಇನ್ನಷ್ಟು ಹದಗೆಡಿಸುವುದಲ್ಲ.
ಹಣದುಬ್ಬರವು ಶತ್ರುವಾಗಿದೆ ಮತ್ತು ಪ್ರತಿಯೊಬ್ಬರನ್ನೂ ಬಡವರನ್ನಾಗಿ ಮಾಡುತ್ತದೆ ಎಂದು ಸುನಾಕ್ ಹೇಳಿದ್ದಾರೆ. 2024ರ ಮಹಾ ಚುನಾವಣೆಯಲ್ಲಿ ವಿಪಕ್ಷ ಲೇಬರ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ತಾನು ಅತ್ಯುತ್ತಮ ವ್ಯಕ್ತಿಯಾಗಿದ್ದೇನೆ ಎಂದು ಪ್ರತಿಪಾದಿಸಿದ ಸುನಾಕ್, ತಾನು ತೆರಿಗೆ ಕಡಿತಗೊಳಿಸಲು ಬಯಸುತ್ತೇನೆ ಮತ್ತು ಕಡಿತ ಮಾಡುತ್ತೇನೆ. ಆದರೆ ಅದನ್ನು ಅತ್ಯಂತ ಯೋಜಿತ ರೀತಿಯಲ್ಲಿ ಮಾಡಬೇಕಿದೆ. ಮತ್ತು ಕಾಲಾನಂತರ ಅದನ್ನು ಸಮರ್ಥನೀಯವಾಗಿ ಮಾಡುವ ಏಕೈಕ ಮಾರ್ಗವೆಂದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಮತ್ತೆ ಗೆಲ್ಲುವಂತೆ ಮಾಡುವುದು ಎಂದು ಹೇಳಿದ್ದಾರೆ.