ಪಿಎಸ್ಸೈ ಹಗರಣವೆಂಬ ಭಯೋತ್ಪಾದನೆ: ಹೈಕೋರ್ಟ್ ಮೌಖಿಕ ಅಭಿಪ್ರಾಯ

ಬೆಂಗಳೂರು, ಜು.14: ಪಿಎಸ್ಸೈ ನೇಮಕಾತಿ ಅಕ್ರಮದಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಈ ಹಗರಣವು ಸಮಾಜದ ವಿರುದ್ಧದ ಭಯೋತ್ಪಾದಕ ಕೃತ್ಯವಾಗಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳಾದ ಸಿ.ಎನ್.ಶಶಿಧರ್ ಹಾಗೂ ಇನ್ನಿತರರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 2.30ರ ಬಳಿಕವೂ ಮುಂದುವರೆಸಿದ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಹಗರಣವು ಸಮಾಜದ ವಿರುದ್ಧದ ಭಯೋತ್ಪಾದಕ ಕೃತ್ಯವಾಗಿದೆ ಹಾಗೂ ಕೊಲೆಗಿಂತ ಹೇಯ ಕೃತ್ಯವಾಗಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ನ್ಯಾಯಪೀಠವು, ಪಿಎಸ್ಸೈ ಹಗರಣದಿಂದ ಸಮಾಜಕ್ಕೆ ಬಹುದೊಡ್ಡ ಧಕ್ಕೆಯಾಗಿದೆ. ಇಂತಹ ಹಗರಣಗಳು ಕೋರ್ಟ್ ಮುಂದೆ ಬಂದಾಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಳೆದ ವಿಚಾರಣೆ ವೇಳೆಯೂ ಪಿಎಸ್ಸೈ ಹಗರಣದಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಹೇಳಿದ್ದೇ ಎಂದು ತಿಳಿಸಿದರು.
ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಒಂದು ಗಂಟೆ ವಾದ ಮಂಡಿಸುವುದು ಅಗತ್ಯವೇ? ನ್ಯಾಯಪೀಠವು ಪ್ರಶ್ನೆ ಕೇಳದಂತೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿತು.
ಸರಕಾರದ ಪರ ವಕೀಲರು, ಪಿಎಸ್ಸೈ ಹಗರಣದ ತನಿಖೆಯ ವೇಳೆಯಲ್ಲಿ 2.5 ಕೋಟಿ ರೂ.ವಶಪಡಿಸಿಕೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಪಿಎಸ್ಸೈ ಅಕ್ರಮ ಕುರಿತ ಹಾಗೂ ಓಎಂಆರ್ ಶೀಟುಗಳ ವಿವರಗಳನ್ನು ಒಳಗೊಂಡ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ(ಆರ್‍ಎಫ್‍ಎಸ್‍ಎಲ್) ವರದಿ ಹಾಗೂ ತನಿಖಾ ವರದಿಯನ್ನು ಸಿಐಡಿ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್‍ಗೆ ಸಲ್ಲಿಸುವಂತೆ ಆದೇಶಿಸಿತು. ವಿಚಾರಣೆಯನ್ನು ಜು.20ಕ್ಕೆ ಮುಂದೂಡಿತು.







