ಶ್ರೀಲಂಕಾ : ಸರಕಾರಿ ಕಟ್ಟಡಗಳಿಂದ ತೆರಳಲು ಪ್ರತಿಭಟನಾಕಾರರ ಒಪ್ಪಿಗೆ

ಕೊಲಂಬೊ, ಜು.14: ದೇಶಕ್ಕೆ ಎದುರಾಗಿರುವ ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಪ್ರಧಾನಮಂತ್ರಿಯನ್ನು ಕೆಳಗಿಳಿಸುವ ತಮ್ಮ ಪ್ರಯತ್ನವನ್ನು ಮುಂದುವರಿಸಲಿದ್ದೇವೆ. ಆದರೆ ಸರಕಾರಿ ಕಟ್ಟಡಗಳ ಸ್ವಾಧೀನವನ್ನು ತೆರವುಗೊಳಿಸಲಾಗುವುದು ಎಂದು ಶ್ರೀಲಂಕಾದ ಸರಕಾರಿ ವಿರೋಧಿ ಪ್ರತಿಭಟನಾಕಾರರು ಗುರುವಾರ ಹೇಳಿದ್ದಾರೆ.
ಕಳೆದ ಶನಿವಾರ ಪ್ರತಿಭಟನಾಕಾರರು ಅಧ್ಯಕ್ಷ ಗೊತಬಯ ರಾಜಪಕ್ಸರ ಸರಕಾರಿ ನಿವಾಸದ ಮೇಲೆ ದಾಳಿ ನಡೆಸಿ ಒಳನುಗ್ಗಿದ್ದರು. ಅದಕ್ಕೂ ಮುನ್ನವೇ ಗೊತಬಯ ಮಾಲ್ದೀವ್ಸ್ಗೆ ಪರಾರಿಯಾಗಿದ್ದರು. ಬುಧವಾರ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಅವರ ಸರಕಾರಿ ನಿವಾಸದ ಒಳಗೂ ಪ್ರತಿಭಟನಾಕಾರರು ನುಗ್ಗಿದ್ದರು.
ನಾವು ಅಧ್ಯಕ್ಷರ ನಿವಾಸ, ಅಧ್ಯಕ್ಷೀಯ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯಿಂದ ತಕ್ಷಣವೇ ಜಾರಿಗೆ ಬರುವಂತೆ ಶಾಂತಿಯುತವಾಗಿ ಹಿಂದಕ್ಕೆ ಸರಿಯುತ್ತಿದ್ದೇವೆ. ಆದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರ ವಕ್ತಾರರು ಹೇಳಿದ್ದಾರೆ. ಈ ಮಧ್ಯೆ, ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಈ ಹಿಂದೆ ಘೋಷಿಸಿದ್ದ ಗೊತಬಯ, ಇನ್ನೂ ತಮ್ಮ ರಾಜೀನಾಮೆ ಪ್ರಕಟಿಸಿಲ್ಲ. ಅವರು ಈಗ ಮಾಲ್ದೀವ್ಸ್ನಿಂದ ಸಿಂಗಾಪುರಕ್ಕೆ ತೆರಳಿದ್ದಾರೆ.
ಅಲ್ಲಿ ಕೆಲ ಸಮಯ ಉಳಿದುಕೊಂಡು ಅಲ್ಲಿಂದ ಯುಎಇಗೆ ತೆರಳುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಧ್ಯಕ್ಷರಾಗಿದ್ದಷ್ಟು ಸಮಯ ಬಂಧನದಿಂದ ರಕ್ಷಣೆ ಇರುವುದರಿಂದ ಅವರು ರಾಜೀನಾಮೆ ಪ್ರಕಟಿಸುವ ಮುನ್ನ ವಿದೇಶದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.
ಸರಕಾರಿ ಕಟ್ಟಡಗಳಿಂದ ಹಿಂದಕ್ಕೆ ಸರಿಯುವಂತೆ ಪ್ರತಿಭಟನೆಯನ್ನು ಬೆಂಬಲಿಸಿದ್ದ ಉನ್ನತ ಬೌದ್ಧ ಸನ್ಯಾಸಿಯೂ ಕರೆ ನೀಡಿದ್ದರು. 200 ವರ್ಷಕ್ಕಿಂತಲೂ ಹೆಚ್ಚು ಅಧ್ಯ್ಷಕರ ನಿವಾಸದ ಅಮೂಲ್ಯವಾದ ಕಲೆ ಮತ್ತು ಕಲಾಕೃತಿಯನ್ನು ಸಂರಕ್ಷಿಸುವುದನ್ನು ಖಚಿತಪಡಿಸಲು ನಿವಾಸವನ್ನು ಸರಕಾರಿ ಅಧಿಕಾರಿಗಳಿಗೆ ಹಿಂತಿರುಗಿಸಬೇಕು. ಇದು ರಾಷ್ಟ್ರೀಯ ಸಂಪತ್ತು, ಇದನ್ನು ಸರಕಾರಕ್ಕೇ ಮರಳಿಸಬೇಕು ಎಂದವರು ಪ್ರತಿಭಟನಾಕಾರರನ್ನು ಒತ್ತಾಯಿಸಿದ್ದರು.
ಅಧ್ಯಕ್ಷ ಗೊತಬಯ ಪರಾರಿಯಾದ ಬಳಿಕ ಅಧ್ಯಕ್ಷರ ನಿವಾಸದಲ್ಲಿದ್ದ ಭದ್ರತಾ ಸಿಬಂದಿಯನ್ನೂ ಪ್ರತಿಭಟನಾಕಾರರು ಹಿಂದಕ್ಕೆ ಕಳಿಸಿದ್ದರು. ಶನಿವಾರದ ಬಳಿಕ ಸಾವಿರಾರು ಮಂದಿ ಯಾವುದೇ ನಿರ್ಬಂಧವಿಲ್ಲದೆ ಅಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ರಾಜೀನಾಮೆ ಪ್ರಕಟಿಸದ ಗೊತಬಯ, ಈಗ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.
ಅವರೊಬ್ಬ ಹೇಡಿ. ರಾಜಪಕ್ಸ ಕುಟುಂಬದೊಂದಿಗೆ ನಮ್ಮ ದೇಶವನ್ನು ಸರ್ವನಾಶ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ನಮಗೆ ವಿಶ್ವಾಸವಿಲ್ಲ. ನಮಗೆ ಹೊಸ ಸರಕಾರದ ಅಗತ್ಯವಿದೆ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ. ಈ ಮಧ್ಯೆ, ಗುರುವಾರ ಕರ್ಫ್ಯೂವನ್ನು ತುಸುಹೊತ್ತು ಸಡಿಲಿಸಿದ ಬಳಿಕ ಸಂಜೆ ಮತ್ತೆ ಜಾರಿಗೊಳಿಸಲಾಗಿದೆ. ಬುಧವಾರ ರಾತ್ರಿ ಸಂಸತ್ತಿನ ಹೊರಗಡೆ ನಡೆದ ಘರ್ಷಣೆಯಲ್ಲಿ ಓರ್ವ ಯೋಧ ಮತ್ತು ಒಬ್ಬ ಪೊಲೀಸ್ ಸಿಬಂದಿ ಗಾಯಗೊಂಡಿದ್ದಾರೆ.
ಸಂಸತ್ತಿಗೆ ನುಗ್ಗುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಬುಧವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದಾಗ ಸುಮಾರು 85 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಒಬ್ಬ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಕೊಲಂಬೊದ ಪ್ರಧಾನ ಆಸ್ಪತ್ರೆಯ ಹೇಳಿಕೆ ತಿಳಿಸಿದೆ.
ಗೊತಬಯ ರಾಜೀನಾಮೆ ನೀಡದಿದ್ದರೆ ಬೇರೆ ಆಯ್ಕೆಯ ಪರಿಗಣನೆ:
ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಗೊತಬಯ ರಾಜಪಕ್ಸ, ಇನ್ನೂ ರಾಜೀನಾಮೆ ಪ್ರಕಟಿಸಿಲ್ಲ ಎಂದು ಸಂಸತ್ನ ಸ್ಪೀಕರ್ ಮಹಿಂದಾ ಅಬೆವರ್ದನ ಹೇಳಿದ್ದಾರೆ.
ರಾಜೀನಾಮೆ ಪ್ರಕಟಿಸುವಂತೆ ಸೂಚಿಸಲಾಗಿದೆ. ಅವರು ಒಪ್ಪದಿದ್ದರೆ , ಅವರನ್ನು ಪದಚ್ಯುತಗೊಳಿಸಲು ಬೇರೆ ಆಯ್ಕೆಗಳನ್ನು ಪರಿಗಣಿಸಲಾಗುವುದು ಎಂದು ಅಬೆವರ್ದನ ಹೇಳಿದ್ದಾರೆ. ಈ ಮಧ್ಯೆ, ರಾಜಪಕ್ಸರ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಲಾಗಿದೆ. ಅವರು ಹಸಿರುನಿಶಾನೆ ತೋರಿದೊಡನೆ ಸ್ಪೀಕರ್ ಅದನ್ನು ಪ್ರಕಟಿಸಲಿದ್ದಾರೆ ಎಂದು ಭದ್ರತಾ ಪಡೆಯ ಮೂಲಗಳು ಹೇಳಿವೆ.
ಈ ನಡುವೆ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ ಎಂದು ಹಲವು ವರದಿಗಳು ತಿಳಿಸಿವೆ.







