BBMP ವಾರ್ಡ್ ಪುನರ್ ವಿಂಗಡಣೆ: 3 ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿ ಸಲ್ಲಿಕೆ

ಬೆಂಗಳೂರು, ಜು.14: ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ 3 ಸಾವಿರಕ್ಕೂ ಅಧಿಕ ಆಕ್ಷೇಪಣಾ ಅರ್ಜಿಗಳು ಬಂದಿದ್ದು, ಹೆಸರು ಬದಲಾವಣೆ ಕುರಿತು ಅಧಿಕ ಆಕ್ಷೇಪಣೆಗಳು ಬಂದಿವೆ. ಸರಕಾರ ಮಟ್ಟದಲ್ಲಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರ್ಡ್ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 1,500 ಕ್ಕೂ ಅಧಿಕ ಅರ್ಜಿಗಳು ವಾರ್ಡ್ ಹೆಸರು ಬದಲಾವಣೆಗೆ ಸಂಬಂಧಿಸಿವೆ. ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದಲ್ಲಿ 479 ಅರ್ಜಿಗಳು ಹೆಸರು ಬದಲಾವಣೆಗೆ ಸಂಬಂಧಿಸಿವೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಬಿಬಿಎಂಪಿ ಪಾಲಿಕೆಗೆ ವಾರ್ಡ್ ವಿಂಗಡಣೆ ವರದಿಯನ್ನು ಸಲ್ಲಿಸಿದೆ. ಹಾಗಾಗಿ ಸರಕಾರ ಮಟ್ಟದಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು. ಇದಕ್ಕಾಗಿ ಉಪ-ಸಮಿತಿಯನ್ನು ರಚಿಸಲಾಗಿದೆ. ವಿಶೇಷ ಆಯುಕ್ತ ದೀಪಕ್ ಅವರ ನೇತೃತ್ವದಲ್ಲಿ ಸಲಹೆಗಳನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹೆಬ್ಬಾಳದಲ್ಲಿ ರಸ್ತೆ ಅಗಲೀಕರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ರೈಲ್ವೇ ಹಳಿ ಹಾದು ಹೋದ ಕಾರಣ ಅಲ್ಲಿ ಸುರಂಗವನ್ನು ಕೊರೆಯುವ ಚಿಂತನೆ ನಡೆದಿದೆ. ಸುರಂಗದಿಂದ ಉಂಟಾಗುವ ಜನರ ಸಮಸ್ಯೆಗಳನ್ನು ಆಲಿಸಿ, ನಂತರ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚೆ ನಡಸಬೇಕಾಗಿದೆ ಎಂದು ಅವರು ತಿಳಿಸಿದರು.
ವಕ್ಫ್ ಬೋರ್ಡ್‍ಗೆ ನೋಟಿಸ್
ಈದ್ಗಾ ಮೈದಾನದ ಕುರಿತು ವಕ್ಫ್ ಬೋರ್ಡ್‍ಗೆ ಬಿಬಿಎಂಪಿ ನೋಟಿಸ್ ಅನ್ನು ಜಾರಿ ಮಾಡಿದೆ. ಖಾತೆಯನ್ನು ಮಾಡಿಕೊಡುವ ಅಧಿಕಾರ ಜಂಟಿ ಆಯುಕ್ತರ ವ್ಯಾಪ್ತಿಗೆ ಬರುವ ಕಾರಣ ಅವರು ದಾಖಲೆಗಳನ್ನು ಪರಿಶೀಲಿಸುತ್ತಾರೆ. ನೋಟಿಫಿಕೇಷನ್ ಆಧಾರದ ಮೇಲೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಹಾಗಾಗಿ ಪಶ್ಚಿಮ ವಲಯದ ಜಂಟಿ ಆಯುಕ್ತರು ನಿರ್ಧಾರವನ್ನು ತೆಗೆದುಕೊಂಡು ಶೀಘ್ರದಲ್ಲಿ ಆದೇಶವೊಂದನ್ನು ಹೊರಡಿಸಲಾಗುವುದು.
-ತುಷಾರ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ







