ಪ್ರೌಢಶಾಲಾ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡಲು ಆದ್ಯತೆ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಜು. 14: ‘ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಎಂಟು, ಒಂಭತ್ತನೆ ತರಗತಿಯ ಮಕ್ಕಳಿಗೆ ತಾಂತ್ರಿಕ ಶಿಕ್ಷಣದ ಪ್ರಾಥಮಿಕ ಜ್ಞಾನವನ್ನು ನೀಡುವ ಮೂಲಕ ಅವರಲ್ಲಿನ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ‘ವಿಶ್ವ ಯುವ ಕೌಶಲ್ಯ ದಿನಾಚರಣೆ' ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ತಾಂತ್ರಿಕ ಶಿಕ್ಷಣದ ಜ್ಞಾನ ನೀಡಿದರು ಅವರ ಜೀವನೋಪಾಯಕ್ಕೆ ಅನುಕೂಲವಾಗಲಿದೆ. ಮಾತ್ರವಲ್ಲ ಅವರಿಗೆ ಭವಿಷ್ಯದಲ್ಲಿ ಸಹಕಾರಿಯಾಗಲಿದೆ' ಎಂದು ಅವರು ಹೇಳಿದರು.
‘ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವೂ ದೇಶದಲ್ಲಿ ನಂಬರ್ ಒನ್ ಸ್ಥಾನಕ್ಕೇರಬೇಕು. ಆ ನಿಟ್ಟಿನಲಿ ವಿಶ್ವದ 10 ದೇಶಗಳ ಪೈಕಿ ಕರ್ನಾಟಕವೂ ಒಂದು ಸ್ಥಾನವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಹೀಗಾಗಿ ರಾಜ್ಯದಲ್ಲಿ ಐಟಿಐಗಳನ್ನು ಹೈಟೆಕ್ ಮಾಡುವುದರ ಜತೆಗೆ, ಜಿಟಿಟಿಸಿಗಳ ಆಧುನೀಕರಣ ಮತ್ತು ಸಾಮಥ್ರ್ಯ ವೃದ್ಧಿಸಲು ಕ್ರಮ ಕೈಗೊಳ್ಳಲಾಗಿದೆ' ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
‘ಕರ್ನಾಟಕ ರಾಜ್ಯ ಆರು ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲಾಗುವುದು. ಇಲ್ಲಿನ ಗುಣಮಟ್ಟದಿಂದ ಐಐಟಿಗೆ ಹೋಗುವುದನ್ನು ತಡೆದು, ಅಲ್ಲಿಗೆ ಹೋಗುವವರು ಇಲ್ಲಿ ಬಂದು ಶಿಕ್ಷಣ ಪಡೆಯುವಂತಾಗಬೇಕು. ಎಲ್ಲರಿಂದಲೂ ಐಐಟಿಗಳಿಗೆ ಸರಿಸಾಟಿಯಾಗುವಂತೆ ಉನ್ನತ ದರ್ಜೆಗೇರಿಸುವ ಮೂಲಕ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ನಮ್ಮ ಅಪೇಕ್ಷೆ' ಎಂದು ಅವರು ಮಾಹಿತಿ ನೀಡಿದರು.
‘ಕೌಶಲ್ಯವೇ ದೇಶದ ಶಕ್ತಿ. ಕೌಶಲ್ಯ ವೃದ್ಧಿಯಿಂದ ದೇಶಕ್ಕೆ ಒಳಿತಾಗಲಿದೆ. ಮಾತ್ರವಲ್ಲ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ಉತ್ಕøಷ್ಟ ಮಾನವ ಸಂಪನ್ಮೂಲ ದೊರೆಯಲಿದೆ. ಮಾತ್ರವಲ್ಲ, ಎಲ್ಲರಿಗೂ ಉದ್ಯೋಗ ದೊರೆಯಲಿದೆ. ‘ದುಡ್ಡೇ ದೊಡ್ಡಪ್ಪ' ಎಂಬ ಗಾಧೆ ಮಾತಿದೆ. ಆದರೆ, ಇಂದು ‘ದುಡಿಮೆಯೇ ದೊಡ್ಡಪ್ಪ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕೌಶಲಾಭಿವೃದ್ಧಿಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ, ‘ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಸರಕಾರ ಕ್ರಮ ವಹಿಸಿದ್ದು, ಇದಕ್ಕಾಗಿ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ಫೋಸಿಸ್ ಸಂಸ್ಥೆ 27ಲಕ್ಷ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಿದ್ದು, ಆ ಪೈಕಿ ಕರ್ನಾಟಕದ 17 ಲಕ್ಷ ಮಂದಿ ತರಬೇತಿ ಪಡೆದಿದ್ದಾರೆ' ಎಂದು ಅವರು ಮಾಹಿತಿ ನೀಡಿದರು.
‘ಪ್ರತಿ ವರ್ಷ ಸುಮಾರು 5ಲಕ್ಷ ಮಂದಿಗೆ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಿದ್ದು, ಇದರಿಂದ ಉದ್ಯೋಗ ನೀಡುವ ಕಂಪೆನಿಗಳಿಗೆ ಅನುಕೂಲವಾಗಲಿದೆ. ಶಿಕ್ಷಣ, ಜ್ಞಾನ ಹಾಗೂ ವೃತ್ತಿ ಆಧಾರದ ಕೌಶಲ್ಯ ತರಬೇತಿ ನೀಡಲು ಸರಕಾರ ಕ್ರಮ ಕೈಗೊಂಡಿದ್ದು, ಇದರಿಂದ ಗುಣಮಟ್ಟದ ಮಾನವ ಸಂಪನ್ಮೂಲ ಕಂಪೆನಿಗಳಿಗೆ ಸಿಗಲಿದೆ' ಎಂದು ಡಾ.ಅಶ್ವತ್ಥ ನಾರಾಯಣ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವ ಕುಮಾರ್, ಜೀವನೋಪಾಯ ಮಿಷನ್ ನಿರ್ದೇಶಕಿ ಮಂಜುಶ್ರೀ, ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಇನ್ನಿತರರು ಹಾಜರಿದ್ದರು.
5 ಲಕ್ಷ ಮಹಿಳೆಯರಿಗೆ ಅನುಕೂಲ
‘ಕೌಶಲ್ಯ ಎಂಬುದು ಮನುಷ್ಯನಿಗೆ ದೇವರು ಕೊಟ್ಟ ವರ. ಅದರ ಜೊತೆಗೆ ಜ್ಞಾನವನ್ನು ಜೋಡಣೆ ಮಾಡುವ ಕೆಲಸ ಆಗಬೇಕು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಕೌಶಲ್ಯ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಸ್ತ್ರೀಶಕ್ತಿ ಸಂಘಗಳ ಮೂಲಕ 5 ಲಕ್ಷ ಮಹಿಳೆಯರಿಗೆ ಕೌಶಲ್ಯ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅನುಕೂಲವಾಗಲಿದೆ'
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ







