ಫೆಟಾ ಚೀಸ್ ವಿವಾದ: ಗ್ರೀಸ್ ಗೆ ಗೆಲುವು
ಬ್ರಸೆಲ್ಸ್, ಜು.14: ಚೀಸ್ (ಗಿಣ್ಣು)ಗೆ ಫೆಟಾ ಎಂಬ ಪದ ಬಳಸುವ ಕುರಿತು ಗ್ರೀಸ್ ಮತ್ತು ಡೆನ್ಮಾರ್ಕ್ ನಡುವೆ ಇದ್ದ ವಿವಾದವು ಯುರೋಪ್ನ ಉನ್ನತ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಈ ಪ್ರಕರಣದಲ್ಲಿ ಗ್ರೀಸ್ನ ಪರವಾಗಿ ತೀರ್ಪು ಪ್ರಕಟವಾಗಿದೆ.
6000 ವರ್ಷಗಳಿಂದ ಕುರಿ ಮತ್ತು ಮೇಕೆ ಹಾಲಿನ ಚೀಸ್ ಮಾಡುತ್ತಿದ್ದು ಫೆಟಾ ಎಂಬ ಪದವನ್ನು ಈ ಹಿಂದಿನಿಂದಲೂ ಬಳಸುತ್ತಿದ್ದೇವೆ. ಈ ಪದ ತನ್ನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ ಎಂದು ಗ್ರೀಸ್ ವಾದ ಮಂಡಿಸಿತ್ತು. ಈ ವಾದವನ್ನು ಲುಕ್ಸೆಂಬರ್ಗ್ನಲ್ಲಿರುವ ಕೋರ್ಟ್ ಆಫ್ ಜಸ್ಟಿಸ್ ಆಫ್ ಯುರೋಪಿಯನ್ ಯೂನಿಯನ್ (ಸಿಜೆಇಯು) ಎತ್ತಿಹಿಡಿದಿದೆ.
ಯುರೋಪಿಯನ್ ಒಕ್ಕೂಟದ ಹೊರಗೆ ಮಾರಾಟಕ್ಕೆ ಫೆಟಾ ಹೆಸರು ಬಳಸದಂತೆ ಸ್ಥಳೀಯ ಕಂಪೆನಿಗಳನ್ನು ನಿರ್ಬಂಧಿಸದಿದ್ದಕ್ಕಾಗಿ ಡೆನ್ಮಾರ್ಕ್ ಅನ್ನು ನ್ಯಾಯಾಲಯ ಖಂಡಿಸಿದೆ. ಮೂರನೇ ದೇಶಕ್ಕೆ ರಫ್ತು ಮಾಡಲು ಉದ್ದೇಶಿಸಿರುವ ಚೀಸ್ಗೆ ಫೆಟಾ ಪದನಾಮ ಬಳಕೆಯನ್ನು ನಿಲ್ಲಿಸಲು ವಿಫಲವಾದ ಡೆನ್ಮಾರ್ಕ್ ಇಯು ಕಾನೂನಿನ ಅಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಯುರೋಪಿಯನ್ ಯೂನಿಯನ್ ಕಾರ್ಯನಿರ್ವಾಕರು 2002ರಿಂದ ಫೆಟಾವನ್ನು ಸಾಂಪ್ರದಾಯಿಕ ಗ್ರೀಕ್ ಉತ್ಪನ್ನ ಎಂದು ಪರಿಗಣಿಸಿದ್ದಾರೆ. ಗ್ರೀಸ್ ದೇಶದಲ್ಲಿ ವಾರ್ಷಿಕ 1,20,000 ಟನ್ಗಳಷ್ಟು ಫೆಟಾ ಚೀಸ್ ಉತ್ಪಾದನೆಯಾಗುತ್ತದೆ.





