ಎರಡನೇ ಏಕದಿನ: ಭಾರತಕ್ಕೆ 247 ರನ್ ಗುರಿ ನೀಡಿದ ಇಂಗ್ಲೆಂಡ್
ಚಹಾಲ್‌ಗೆ 4 ವಿಕೆಟ್, ಆಂಗ್ಲರಿಗೆ ಮೊಯಿನ್ ಅಲಿ, ಡೇವಿಡ್ ವಿಲ್ಲಿ ಆಸರೆ
ಲಾರ್ಡ್ಸ್, ಜು.14: ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್(4-47)ನೇತೃತ್ವದ ಭಾರತದ ಬೌಲರ್‌ಗಳ ಶಿಸ್ತುಬದ್ದ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಇಂಗ್ಲೆಂಡ್ ತಂಡ ಆಲ್‌ರೌಂಡರ್‌ಗಳಾದ ಮೊಯಿನ್ ಅಲಿ(47 ರನ್, 64 ಎಸೆತ) ಹಾಗೂ ಡೇವಿಡ್ ವಿಲ್ಲಿ(41 ರನ್, 49 ಎಸೆತ)ಉಪಯುಕ್ತ ಜೊತೆಯಾಟದ ನೆರವಿನಿಂದ ಗೌರವಾರ್ಹ ಮೊತ್ತ ಕಲೆ ಹಾಕಿದೆ.
ಗುರುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 49 ಓವರ್‌ಗಳಲ್ಲಿ 246 ರನ್ ಗಳಿಸಿ ಆಲೌಟಾಯಿತು. ಸ್ಪಿನ್ನರ್ ಚಹಾಲ್, ಹಾರ್ದಿಕ್ ಪಾಂಡ್ಯ(2-28) ಹಾಗೂ ಜಸ್‌ಪ್ರಿತ್ ಬುಮ್ರಾ(2-49)ದಾಳಿಗೆ ಕಂಗಲಾದ ಇಂಗ್ಲೆಂಡ್ ಒಂದು ಹಂತದಲ್ಲಿ 148 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಆಂಗ್ಲರಿಗೆ ಆಸರೆಯಾದ ಮೊಯಿನ್ ಅಲಿ(47 ರನ್, 64 ಎಸೆತ, 2 ಬೌಂಡರಿ, 2 ಸಿಕ್ಸರ್)ಹಾಗೂ ಡೇವಿಡ್ ವಿಲ್ಲಿ(41 ರನ್, 49 ಎಸೆತ, 2 ಬೌಂಡರಿ, 2 ಸಿಕ್ಸರ್)7ನೇ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಲಿ ಅವರು ಲಿವಿಂಗ್‌ಸ್ಟೋನ್(33 ರನ್, 33 ಎಸೆತ)ಜೊತೆಗೆ 6ನೇ ವಿಕೆಟ್‌ಗೆ 46 ರನ್ ಜೊತೆಯಾಟದಲ್ಲಿ ಭಾಗಿಯಾದರು.
ಇನಿಂಗ್ಸ್ ಆರಂಭಿಸಿದ ಬೈರ್‌ಸ್ಟೋವ್(38 ರನ್, 38 ಎಸೆತ) ಹಾಗೂ ಜೇಸನ್ ರಾಯ್(23 ರನ್, 33 ಎಸೆತ) ಮೊದಲ ವಿಕೆಟ್‌ಗೆ 41 ರನ್ ಸೇರಿಸಿದರು. ಆಲ್‌ರೌಂಡರ್ ಬೆನ್ ಸ್ಟೋಕ್ಸ್ 21 ರನ್ ಗಳಿಸಿ ಚಹಾಲ್‌ಗೆ ಔಟಾದರು. ನಾಯಕ ಜೋಸ್ ಬಟ್ಲರ್(4 ರನ್)ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
15ನೇ ಓವರ್‌ಗೆ 1 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದ್ದ ಇಂಗ್ಲೆಂಡ್ ದಿಢೀರ್ ಕುಸಿತ ಕಂಡಿತು. ರೀಸ್ ಟೋಪ್ಲೆ(3 ರನ್)ವಿಕೆಟನ್ನು ಕಬಳಿಸಿದ ಬುಮ್ರಾ ಇಂಗ್ಲೆಂಡ್ ಇನಿಂಗ್ಸ್‌ಗೆ ತೆರೆ ಎಳೆದರು.
ಇಂಗ್ಲೆಂಡ್ ಪರ ಮೊಯಿನ್ ಅಲಿ ಸರ್ವಾಧಿಕ ಸ್ಕೋರ್ ಗಳಿಸಿದರು.







