ಅಸ್ಸಾಂ:ಯುಎಪಿಎ ಅಡಿ ಬಂಧಿತ ಕಾಲೇಜು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಮತಿ

ಗುವಾಹಟಿ,ಜು.14: ಬಂಡುಕೋರ ಸಂಘಟನೆ ಉಲ್ಫಾ-I ಅನ್ನು ಬೆಂಬಲಿಸಿದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯಡಿ ಬಂಧನದಲ್ಲಿರುವ ಜೋರ್ಹಾತ್ನ ಕಾಲೇಜು ವಿದ್ಯಾರ್ಥಿನಿಗೆ ಜು.16ರಿಂದ ಆ.1ರವರೆಗೆ ನಡೆಯಲಿರುವ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗಲು ನ್ಯಾಯಾಲಯವು ಅನುಮತಿಯನ್ನು ನೀಡಿದೆ. ಇದಕ್ಕಾಗಿ ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ಅದು ಜೈಲು ಅಧಿಕಾರಿಗಳಿಗೆ ನಿರ್ದೇಶ ನೀಡಿದೆ.
ಬರಶ್ರೀ ಬುರಗೋಹೈನ್ (19) ಅವರನ್ನು ಮೇ 18ರಂದು ಅಸ್ಸಾಮಿನ ಗೋಲಘಾಟ್ನಲ್ಲಿ ಬಂಧಿಸಲಾಗಿದ್ದು,ಆಗಿನಿಂದಲೂ ಅವರು ಗೋಲಘಾಟ್ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.
ಮೇ 17ರಂದು ಬರಶ್ರೀ ಮಾಡಿದ್ದ ಫೇಸ್ಬುಕ್ ಪೋಸ್ಟ್ ನಲ್ಲಿಯ ಕವನದಲ್ಲಿ ಉಲ್ಫಾ-I ಅನ್ನು ಬೆಂಬಲಿಸಿದ್ದರು ಎಂದು ಪೊಲೀಸರು ಎಫ್ ಐಆರ್ ನಲ್ಲಿ ಆರೋಪಿಸಿದ್ದಾರೆ. ಆದರೆ ಬರಶ್ರೀ ಪೋಸ್ಟ್ ಮಾಡಿದ್ದ ಕವನದಲ್ಲಿ ಉಲ್ಫಾ-I ರ ಉಲ್ಲೇಖವೇ ಇರಲಿಲ್ಲ.
ದಿನಗೂಲಿ ಕಾರ್ಮಿಕ ದಂಪತಿಯ ಪುತ್ರಿ ಬರಶ್ರೀ ಪರ ಗುರುವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ವಕೀಲರು ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿಕೊಂಡಿದ್ದರು.
ಜಾಮೀನು ಕೋರಿ ಬರಶ್ರೀ ಸಲ್ಲಿಸಿರುವ ಅರ್ಜಿಯು ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿದ್ದು,ಜು.21ರಂದು ವಿಚಾರಣೆ ನಡೆಯಲಿದೆ.





