ನಕಲಿ ದಾಖಲೆ ಸೃಷ್ಟಿಸಿ ಟೆಂಡರ್ ಪಡೆದಿರುವ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಮಾತನಾಡಲಿ: ಆಪ್

ಬೆಂಗಳೂರು, ಜು.14: ಟೂಲ್‍ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥ್ ನಾರಾಯಣ ಅವರು 5.27 ಕೋಟಿ ರೂ. ಉಳಿಸಿದ್ದೇವೆ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆಯೇ, ಹೊರತು ನಕಲಿ ದಾಖಲೆಗಳನ್ನು ಸಲ್ಲಿಸಿ ಟೆಂಡರ್ ಪಡೆದಿರುವ ಬಗ್ಗೆ ಮಾತನಾಡುತ್ತಿಲ್ಲ. ಈ ಮೂಲಕ ತಮ್ಮ ಕಮಿಷನ್ ಭ್ರಷ್ಟಾಚಾರದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.
ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ವಿತರಿಸುವ ಟೂಲ್‍ಕಿಟ್ ಖರೀದಿ ಟೆಂಡರ್ ನಲ್ಲಿ ಏಕೈಕ ಬಿಡ್ಡರ್ ಇದ್ದ ಕಾರಣ, ಮರುಟೆಂಡರ್ ಮಾಡಲಾಗಿದೆ. ಆದರೆ ಮೊದಲನೇ ಬಾರಿಯ ಪ್ರಕ್ರಿಯೆಯಲ್ಲಿ ಸೋತ ಕಂಪನಿಗೆ ಟೆಂಡರ್ ನೀಡಲಾಗಿದೆ. ಇದು ಕಮಿಷನ್ ಪಡೆಯಲು ಮಾಡಿದ ಕೆಲಸವೇ ಹೊರತು ಹಣ ಉಳಿಸಲು ಅಲ್ಲ. ಟೆಂಡರ್ ಗಿಟ್ಟಿಸಿಕೊಳ್ಳಲು ನಕಲಿ ಕಾಗದ ಪತ್ರಗಳನ್ನು ಕಂಪನಿಯು ನೀಡಿದೆ. ನಿಯಮಾವಳಿ ಪ್ರಕಾರ ಶೇ.30 ಸಾಮಗ್ರಿಗಳನ್ನು ಪೂರೈಸುವ ಶಕ್ತಿ ಹೊಂದಿರುವ ಬಗ್ಗೆ ಕಂಪನಿಯು ದಾಖಲೆಗಳನ್ನು ಸಲ್ಲಿಸಬೇಕು. ಆದರೆ, ಕಂಪನಿಯು ಈ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿರುವುದು ಜಿಎಸ್‍ಟಿ ಪೋರ್ಟಲ್ ಮೂಲಕ ಬಹಿರಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ, ಇದೇ ಕಂಪನಿ ಕೆಲ ತಿಂಗಳ ಹಿಂದೆ ಲ್ಯಾಪ್‍ಟಾಪ್ ಹಗರಣದಲ್ಲಿ ಭಾಗಿಯಾಗಿತ್ತು. ಹಿಂದೆ ರೂ. 14,000 ಸಿಗುತ್ತಿದ್ದ ಲ್ಯಾಪ್‍ಟಾಪ್ ಅನ್ನು ರೂ.24,000ಕ್ಕೆ ಕೊಂಡು ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿದೆ ಎಂದು ಅವರು ಆರೋಪಿಸಿದರು.
ಉಭಯ ಸದನಗಳಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾದರೂ ಯಾವುದೇ ನಿರ್ಣಯಕ್ಕೆ ಬಂದಿಲ್ಲ. ಇದನ್ನು ಪ್ರಶ್ನಿಸಬೇಕಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೌನ ವಹಿಸಿವೆ. ಇದರಿಂದ ಆಡಳಿತ ಪಕ್ಷ ಬಿಜೆಪಿ ಜನಪ್ರತಿನಿಧಿಗಳು ಕಮಿಷನ್ ವ್ಯವಹಾರವನ್ನು ರಾಜಾರೋಷವಾಗಿ ನಡೆಸುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.
ಅಶ್ವಥ್ ನಾರಾಯಣ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಿ, ಟೆಂಡರ್ ಹಗರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಸರಕಾರ ಒಂದು ವಾರದೊಳಗೆ ತೀರ್ಮಾನಿಸದೇ ಹೋದರೆ, ಈ ಹಗರಣದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿ ಜನಪರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮೋಹನ್ ದಾಸರಿ, ಬಿ.ಟಿ ನಾಗಣ್ಣ, ಜಗದೀಶ್ ವಿ ಸದಂ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.







