ಚಿಕ್ಕಮಗಳೂರು: ಕಾಯಕಲ್ಪಕ್ಕೆ ಕಾದಿರುವ ಗಿರಿಗಂಗೋತ್ರಿ ಸರಕಾರಿ ಶಾಲೆ
ಪ್ರಾಣಭೀತಿಯಲ್ಲಿ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು ► ನಗರದ ಹೃದಯಭಾಗದಲ್ಲಿದ್ದರೂ ದುರಸ್ತಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ: ಆರೋಪ

ಚಿಕ್ಕಮಗಳೂರು, ಜು.14: ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡದಲ್ಲಿ ಪ್ರಾಣಭೀತಿಯಲ್ಲೇ ಪಾಠ ಕೇಳುತ್ತಿರುವ ಬಡವರ್ಗದ ಮಕ್ಕಳು, ಶಿಥಿಲಗೊಂಡ ಕಟ್ಟಡದ ಮೇಲೆಯೇ ಅವೈಜ್ಞಾನಿಕವಾಗಿ ಮತ್ತೆ ಕಟ್ಟಡ ನಿರ್ಮಿಸಿರುವ ಅಧಿಕಾರಿಗಳು, ನೀರಿನ ಪೂರೈಕೆ ಇಲ್ಲದೆ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿರುವ ಶಾಲಾ ಶಿಕ್ಷಕರು, ಕಲುಷಿತ ನೀರನ್ನೇ ಕುಡಿಯುತ್ತಿರುವ ಮಕ್ಕಳು, ಶೌಚಾಲಯಗಳಿದ್ದರೂ ಬಾಗಿಲುಗಳಿಲ್ಲ. ಇದು ಕಾಫಿನಾಡಿನ ಗಿರಿ ಗಂಗೋತ್ರಿ ಸರಕಾರಿ ಶಾಲೆಯ ದುಸ್ಥಿತಿ.
ಚಿಕ್ಕಮಗಳೂರು ನಗರದ ರಾಮನಹಳ್ಳಿ ಬಡಾವಣೆಯಲ್ಲಿರುವ ಚಿಕ್ಕಮಗಳೂರು-ತರೀಕೆರೆ ರಸ್ತೆಯ ಪಕ್ಕದಲ್ಲಿರುವ ಹಾಗೂ ಕೇಂದ್ರೀಯ ವಿದ್ಯಾಲಯ ಹಾಗೂ ಡಯಟ್ ಕೇಂದ್ರದ ಹಿಂಬದಿಯಲ್ಲಿರುವ ಗಿರಿ ಗಂಗೋತ್ರಿ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 75ಕ್ಕೂ ಹೆಚ್ಚು ಬಡ ಮಕ್ಕಳು ಪ್ರಾಣ ಭೀತಿಯಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ದುಸ್ಥಿತಿ ಕಂಡು ಮಕ್ಕಳ ಪೋಷಕರು ಮಕ್ಕಳನ್ನು ಈ ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ದಾಖಲು ಮಾಡಲು ಮುಂದಾಗಿದ್ದಾರೆ.
ಶಾಲೆಯ ಕಟ್ಟಡವನ್ನು 1968ರಲ್ಲಿ ನಿರ್ಮಿಸಲಾಗಿದೆ. ಅರ್ಧ ಶತಮಾನ ಕಂಡಿರುವ ಈ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಕಟ್ಟಡ ಇಂದೋ, ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಕಟ್ಟಡದ ದುಸ್ಥಿತಿಯ ಬಗ್ಗೆ ಅರಿವಿಲ್ಲದ ಪರಿಣಾಮ 1ರಿಂದ 7ನೇ ತರಗತಿವರೆಗಿನ ಈ ಶಾಲೆಯ ಸುಮಾರು 75 ಮಕ್ಕಳು ಪ್ರತಿನಿತ್ಯ ಶಾಲೆಗೆ ಬರುತ್ತಿದ್ದಾರೆ. ಆದರೆ, ಕಟ್ಟಡದ ದುಸ್ಥಿತಿ ಬಗ್ಗೆ ಅರಿವಿರುವ ಮಕ್ಕಳ ಪೋಷಕರು ಆತಂಕದಿಂದಲೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುವಂತಾಗಿದೆ.
ಈ ಶಾಲೆಯ ಕಟ್ಟಡದಲ್ಲಿ 35 ಕೊಠಡಿಗಳಿವೆ. ಇದರಲ್ಲಿ 20ಕ್ಕೂ ಹೆಚ್ಚು ಕೊಠಡಿಗಳ ಗೋಡೆಗಳು ಸಂಪೂರ್ಣವಾಗಿ ಶಿಥಿಲಗೊಂಡು ಮಳೆ ನೀರು ಸೋರುತ್ತಿದೆ. ಆರ್‌ಸಿಸಿ ಕಟ್ಟಡವಾದರೂ ದುರಸ್ತಿ ಇಲ್ಲದ ಪರಿಣಾಮ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದೆ. ಕಟ್ಟಡದಲ್ಲಿರುವ ಯಾವ ಕೊಠಡಿಗಳಿಗೂ ಕಿಟಕಿ, ಬಾಗಿಲುಗಳಿಲ್ಲವಾಗಿದೆ.
ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೂ ಪಾಠ ಪ್ರವಚನಗಳು ನಡೆಯುತ್ತಿದೆ. 1ನೇ ತರಗತಿಯಲ್ಲಿ 5 ಮಕ್ಕಳು, 2ನೇ ತರಗತಿಯಲ್ಲಿ 12, 3ನೇ ತರಗತಿಯಲ್ಲಿ 10, 4ನೇ ತರಗತಿಯಲ್ಲಿ 12, 5ನೇ ತರಗತಿಯಲ್ಲಿ 12, 6ನೇ ತರಗತಿಯಲ್ಲಿ 13 ಹಾಗೂ 7ನೇ ತರಗತಿಯಲ್ಲಿ 14 ಮಕ್ಕಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಶಾಲೆಯ ಅರ್ಧಭಾಗದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು ಎಲ್ಲಾ ಕಡೆ ಮಳೆಯ ನೀರು ಸೋರುತ್ತಿದೆ. ಛಾವಣಿಯ ಗಾರಿ ಉದುರಿರುವುದು, ಕಟ್ಟಡ ಬಿರುಕು ಬಿಟ್ಟಿರುವ ದೃಶ್ಯಗಳ ಕಂಡು ಬರುತ್ತಿದ್ದು, ಶಾಲಾ ಕಟ್ಟಡ ಕುಸಿದು ಬೀಳಲು ದಿನ ಎಣಿಸುತ್ತಿರುವಂತೆ ಭಾಸವಾಗುತ್ತಿದೆ. ಶಾಲೆಯಲ್ಲಿ ಗಂಡು ಮಕ್ಕಳೊಂದಿಗೆ ಹೆಣ್ಣುಮಕ್ಕಳೂ ಓದುತ್ತಿದ್ದರೂ ಶಿಥಿಲಾವಸ್ಥೆಯಲ್ಲಿರುವ, ಕಿಟಕಿ ಬಾಗಿಲುಗಳಿಲ್ಲದ ಶೌಚಾಲಯಗಳನ್ನೇ ಮಕ್ಕಳು ಬಳಸಬೇಕಾದ ಯಾತನೆ ಅನುಭವಿಸುತ್ತಿದ್ದಾರೆ.
ಒಂದಡೆ ಶಿಥಿಲಗೊಂಡ ಕಟ್ಟಡದಲ್ಲಿರುವ ಕೆಲವು ಕೊಠಡಿಗಳ ಗೋಡೆಗಳಿಗೆ ತೇಪೆಹಾಕಿ ತರಗತಿಗಳನ್ನು ನಡೆಸಲಾಗುತ್ತಿದ್ದರೆ, ಇನ್ನೊಂದಡೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಮೇಲೆ ಕೆಲ ವರ್ಷಗಳ ಹಿಂದೆ ಕೆಲವು ಕೊಠಡಿಗಳನ್ನು ನಿರ್ಮಿಸಿ ಅವುಗಳಲ್ಲಿ ಕೆಲ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಇಡೀ ಕಟ್ಟಡ ಭಾರೀ ಮಳೆಯಿಂದಾಗಿ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಇಡೀ ಕಟ್ಟಡವನ್ನೇ ಕೆಡವಿ ಮಕ್ಕಳನ್ನು ಪಕ್ಕದಲ್ಲಿ ಪಾಳು ಬಿದ್ದಿರುವ ಡಯಟ್ ಕೇಂದ್ರದ ಸುಸಜ್ಜಿತ ಕೊಠಡಿಗಳಿಗೆ ಸ್ಥಳಾಂತರ ಮಾಡಬೇಕೆಂದು ಮಕ್ಕಳ ಪೋಷಕರು ಆಗ್ರಹಿ ಸುತ್ತಿದ್ದರೂ ಶಿಕ್ಷಣ ಇಲಾಖೆಯಾಗಲಿ, ಕ್ಷೇತ್ರದ ಶಾಸಕರಾಗಲಿ ಕ್ಯಾರೇ ಎನ್ನುತ್ತಿಲ್ಲ ಎಂದು ಪೋಷಕರು, ಎಸ್‌ಡಿಎಂಸಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಅಮೃತ್ ಯೋಜ ನೆಯಡಿ ಶಾಲೆಗೆ ನೀರಿನ ಸಂಪರ್ಕವನ್ನು ಕಲ್ಪಿಸಿದ್ದರೂ ಸಮರ್ಪಕವಾಗಿ ನೀರು ಪೂರೈಕೆಯಾಗದೆ ಪ್ರತಿನಿತ್ಯನಗರ ಸಭೆಯ ಟ್ಯಾಂಕರ್‌ನಿಂದ ಶಾಲೆ ನೀರು ತರಿಸಿಕೊಳ್ಳುವ ಪರಿಸ್ಥಿತಿ ಈ ಶಾಲೆಯದ್ದಾಗಿದೆ.
ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಶಾಲಾ ಕಟ್ಟಡ:ಶಾಲಾ ಕಟ್ಟಡದ ಅರ್ಧ ಭಾಗ ಸಂಪೂರ್ಣವಾಗಿ ಶಿಥಿಲಗೊಂಡು ಕೊಠಡಿಗಳಿಗೆ ಕಿಟಕಿ ಬಾಗಿಲುಗಳಿಲ್ಲದಂತಾಗಿರುವುದರಿಂದ ರಾತ್ರಿ ವೇಳೆ ಈ ಶಾಲೆ ಸ್ಥಳೀಯ ಕಿಡಿಗೇಡಿಗಳಿಗೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಶಾಲಾ ರಜಾ ದಿನಗಳಲ್ಲಿ ಇಲ್ಲಿನ ಪುಂಡರು ಕಲ್ಲು ಹೊಡೆದು ಶಾಲೆಯ ಹೆಂಚುಗಳನ್ನು ಒಡೆದು ಹಾಕುತ್ತಾರೆ. ಹೆಂಚುಗಳನ್ನು ತೆಗೆದು ಕಳ್ಳತನ ಮಾಡುತ್ತಾರೆ. ಶಾಲೆಯ ಸುತ್ತಲು ಕಾಂಪೌಂಡ್ ಇಲ್ಲದಿರುವುದರಿಂದ ಶಾಲೆಗೆ ಭದ್ರತೆ ಇಲ್ಲದಂತಾಗಿದೆ. ಈ ಸರಕಾರಿ ಶಾಲೆಯ ಮುಂಭಾಗದಲ್ಲಿರುವ ಕೇಂದ್ರೀಯ ವಿದ್ಯಾಲಯದವರೆಗೂ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಅಲ್ಲೇ ಪಕ್ಕದಲ್ಲಿರುವ ಈ ಶಾಲೆಗೆ ರಸ್ತೆ ನಿರ್ಮಿಸದ ಪರಿಣಾಮ ಮಕ್ಕಳು ಕೆಸರಿನಲ್ಲಿ ನಡೆದು ಬರಬೇಕಿದೆ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ:ಶಾಲೆ ಶಿಥಿಲಾವ್ಯಸ್ಥೆಯಲ್ಲಿರುವುದರಿಂದ ಕಳೆದ ಕೆಲ ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ಕಡಿಮೆಯಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಈ ಸಾಲಿನಲ್ಲಿ ಕೇವಲ 75 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಶಿಥಿಲಗೊಂಡ ಕಟ್ಟಡವನ್ನು 2008ರಿಂದ ಉಪಯೋಗಿಸುತ್ತಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಅನೇಕ ಬಾರಿ ಪೋಷಕರ ಸಭೆ ನಡೆಸಿ ಕಟ್ಟಡ ಒಡೆದು ಹೊಸ ಕಟ್ಟಡ ಮತ್ತು ಶೌಚಾಲಯ, ಶಾಲೆಯ ಸುತ್ತ ಕಾಂಪೌಂಡ್ ನಿರ್ಮಿಸಿಕೊಡುವಂತೆ ಅನೇಕ ಬಾರಿ ಇಲಾಖೆಯೊಂದಿಗೆ ಪತ್ರವ್ಯವಹಾರ ನಡೆಸಲಾಗಿದೆ. ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಸ್‌ಡಿಎಂಸಿ ಸದಸ್ಯರು ಹಾಗೂ ಮಕ್ಕಳು ಪೋಷಕರು ದೂರುತ್ತಿದ್ದಾರೆ.
--------------------------------------
ಶಾಲಾ ಕಟ್ಟಡದ ಅರ್ಧಭಾಗ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬಿಳುವ ಹಂತದಲ್ಲಿದೆ. ಶಿಥಿಲಗೊಂಡ ಕಟ್ಟಡದಲ್ಲೇ ಶೌಚಾಲಯವಿದ್ದು, ಜೀವಭಯದಲ್ಲೇ ವಿದ್ಯಾರ್ಥಿಗಳು ದಿನದೂಡುವಂತಾಗಿದೆ. ಶಿಥಿಲಗೊಂಡ ಕಟ್ಟಡವನ್ನು ಕೆಡವಿ ಶೌಚಾಲಯ, ಶಾಲೆ ಸುತ್ತಲು ಕಂಪೌಂಡ್ ನಿರ್ಮಾಣ ಮಾಡಿಕೊಡುವಂತೆ ಅನೇಕ ಬಾರಿ ಇಲಾಖೆ ಗಮನ ಸೆಳೆದರು ಪ್ರಯೋಜನವಾಗಿಲ್ಲ. ಈ ಸಂಬಂಧ ಇಲಾಖೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ.
- ಶಿವಮ್ಮ, ಶಾಲೆಯ ಮುಖ್ಯ ಶಿಕ್ಷಕಿ
.jpg)







