ಇಸ್ರೇಲ್, ಭಾರತ, ಯುಎಇ ಜತೆಜಂಟಿ ಹೂಡಿಕೆಗೆ ಅಮೆರಿಕ ಪ್ರಸ್ತಾವ

ಜೆರುಸಲೇಂ, ಜು.14: ಜಾಗತಿಕ ರಂಗದಲ್ಲಿ ಚೀನಾದ ಪ್ರಭಾವವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ, ಇಸ್ರೇಲ್ ಮತ್ತು ಯುಎಇ ಜತೆ ಜಂಟಿ ಹೂಡಿಕೆಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸ್ತಾವಿಸಿದ್ದಾರೆ ಎಂದು ವರದಿಯಾಗಿದೆ.
ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ತಮ್ಮ ಪ್ರಥಮ ಮಧ್ಯಪ್ರಾಚ್ಯ ದೇಶಗಳ ಪ್ರವಾಸದಲ್ಲಿರುವ ಬೈಡನ್ ಗುರುವಾರ ಇಸ್ರೇಲ್ನ ಜೆರುಸಲೇಂಗೆ ಭೇಟಿ ನೀಡಿದ ಸಂದರ್ಭ ಅಲ್ಲಿ ಬಹುರಾಷ್ಟ್ರೀಯ ಶೃಂಗಸಭೆಯಲ್ಲಿ ಪಾಲ್ಗೊಂಡರು. ಭಾರತ ಮತ್ತು ಯುಎಇ ಮುಖಂಡರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡರು.
ಇದಕ್ಕೂ ಮುನ್ನ ಬೈಡನ್, ಇಸ್ರೇಲ್ ಪ್ರಧಾನಿ ಯಾಯಿರ್ ಲ್ಯಾಪಿಡ್ ಜತೆ ಮಾತುಕತೆ ನಡೆಸಿದ್ದರು. ಶೃಂಗಸಭೆಯಲ್ಲಿ ಮಾತನಾಡಿದ ಯುಎಇ ಮುಖಂಡರು, ಭಾರತದಲ್ಲಿ ಕೃಷಿ ಯೋಜನೆಗಳಿಗೆ 2 ಮಿಲಿಯನ್ ಯುರೋ ಮೊತ್ತವನ್ನು ಹೂಡಿಕೆ ಮಾಡುವುದಾಗಿ ಮತ್ತು ಈ ಯೋಜನೆಗಳಿಗೆ ಭಾರತ ಭೂಮಿಯನ್ನು ಒದಗಿಸಲಿದೆ ಎಂದರು. ಅಮೆರಿಕ ಮತ್ತು ಇಸ್ರೇಲ್ನ ಖಾಸಗಿ ಸಂಸ್ಥೆಗಳೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಎಂದವರು ವಿವರಿಸಿದರು. ಜೆರುಸಲೇಂನಲ್ಲಿ ಭಾರತದ ಸೌರವಿದ್ಯುತ್ ಮತ್ತು ಪವನ ವಿದ್ಯುತ್ ಯೋಜನೆಯ ಬಗ್ಗೆಯೂ ಚರ್ಚಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬೈಡನ್, ನಾವು ಈ ಪ್ರದೇಶದಲ್ಲಿ ಮುನ್ನಡೆ ಸಾಧಿಸುವುದನ್ನು ಮುಂದುವರಿಸಬೇಕು, ನಿರ್ವಾತ ಸ್ಥಾಪಿಸುವುದನ್ನು ಅಲ್ಲ. ನಿರ್ವಾತ ಸ್ಥಾಪನೆಯಾದರೆ ಅದನ್ನು ಚೀನಾ ಮತ್ತು ರಶ್ಯವು ಅಮೆರಿಕ ಮತ್ತು ಇಸ್ರೇಲ್ನ ಹಿತಾಸಕ್ತಿಗೆ ಮಾತ್ರವಲ್ಲ, ಇತರ ಹಲವು ದೇಶಗಳ ಹಿತಾಸಕ್ತಿಗೆ ವಿರುದ್ಧವಾಗಿ ತುಂಬುತ್ತದೆ. ಹೀಗಾಗಲು ಬಿಡಬಾರದು ಎಂದರು
. ಇಸ್ರೇಲ್ನಿಂದ ಶುಕ್ರವಾರ ಸೌದಿ ಅರೆಬಿಯಾಕ್ಕೆ ತೆರಳಲಿರುವ ಬೈಡನ್, ಇದಕ್ಕೂ ಮುನ್ನ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪೆಲೆಸ್ತೀನ್ನ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.