ಇಂಗ್ಲೆಂಡಿನ ವೇಗದ ಬೌಲರ್ ಟೋಪ್ಲೆ ಮಾರಕ ದಾಳಿಗೆ ತತ್ತರಿಸಿದ ಭಾರತ; ಸರಣಿ ಸಮಬಲ
ಲಂಡನ್: ಇಂಗ್ಲೆಂಡಿನ ವೇಗದ ಬೌಲರ್ ರೀಸ್ ಟೋಪ್ಲೆ ಮಾರಕ ದಾಳಿ (24ಕ್ಕೆ 6 ವಿಕೆಟ್)ಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ ಅತಿಥೇಯರ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 100 ರನ್‍ಗಳ ಸೋಲು ಅನುಭವಿಸಿದೆ. ಮೊದಲ ಪಂದ್ಯವನ್ನು ಭಾರತ ಗೆದ್ದಿದ್ದು, ಸರಣಿ ಸಮಬಲವಾಗಿದೆ.
ಭಾನುವಾರ ಮಾಂಚೆಸ್ಟರ್‍ನ ಓಲ್ಡ್ ಟ್ರಾಫೋರ್ಡ್‍ನಲ್ಲಿ ನಡೆಯುವ ಮೂರನೇ ಪಂದ್ಯ ಸರಣಿ ಯಾರ ಪಾಲಿಗೆ ಎನ್ನುವುದನ್ನು ನಿರ್ಧರಿಸಲಿದೆ. ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 49 ಒವರ್‍ಗಳಲ್ಲಿ 246 ರನ್‍ಗಳ ಸಾಧಾರಣ ಮೊತ್ತಕ್ಕೆ ಭಾರತದ ಬೌಲರ್‍ಗಳು ಕಟ್ಟಿಹಾಕಿದಾಗ ಭಾರತಕ್ಕೆ ಮತ್ತೊಂದು ಸುಲಭ ಜಯ ಸಾಧ್ಯ ಎಂಬ ನಿರೀಕ್ಷೆ ಮೂಡಿತ್ತು. ಆದರೆ ಟೋಪ್ಲೆ ಭಾರತದ ಬ್ಯಾಟಿಂಗ್ ಬಲವನ್ನು ಬುಡಮೇಲು ಮಾಡಿದರು. ಕೇವಲ 38.5 ಓವರ್‍ಗಳಲ್ಲಿ 146 ರನ್‍ಗಳಿಗೆ ಭಾರತ ಆಲೌಟ್ ಆಯಿತು.
ಡೇವಿಡ್ ವಿಲ್ಲಿ (9 ಓವರ್‍ಗಳಲ್ಲಿ 27ಕ್ಕೆ 1), ಮೊಯಿನ್ ಅಲಿ (30/1) ಮತ್ತು ಲಿಯಾಮ್ ಲಿವಿಂಗ್‍ಸ್ಟೋನ್ (4/1) ಕೂಡಾ ಮೊನಚಿನ ದಾಳಿ ನಡೆಸಿದರು. ಟೋಪ್ಲೆಯವರ ಸಾಧನೆ ಕ್ರಿಕೆಟ್ ಮೆಕ್ಕಾದಲ್ಲಿ ಯಾವುದೇ ಇಂಗ್ಲಿಷ್ ಬೌಲರ್‍ನ ಅತ್ಯುತ್ತಮ ಸಾಧನೆಯಾಗಿದೆ. ಮೊದಲ ಪಂದ್ಯದಲ್ಲಿ 10 ವಿಕೆಟ್‍ಗಳ ಅಧಿಕಾರಯುತ ಜಯ ಸಾಧಿಸಿದ್ದ ಭಾರತಕ್ಕೆ ಅದೃಷ್ಟದ ಚಕ್ರ ಇಷ್ಟುಬೇಗ ತಿರುಗುತ್ತದೆ ಎಂಬ ಕಲ್ಪನೆ ಇರಲಿಲ್ಲ.
ಮೊದಲ ಪವರ್ ಪ್ಲೇ ಅಂತ್ಯಗೊಂಡಾಗ ಕೇವಲ 31 ರನ್‍ಗಳಿಗೆ ಅಗ್ರ ಕ್ರಮಾಂಕದ ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಔಟ್ ಆದಾಗಲೇ ಪಂದ್ಯದ ಫಲಿತಾಂಶ ಬಹುತೇಕ ನಿರ್ಧಾರವಾಗಿತ್ತು. ಸೂರ್ಯಕುಮಾರ್ ಯಾದವ್ (27), ಹಾರ್ದಿಕ್ ಪಾಂಡ್ಯ (29) ಮತ್ತು ರವೀಂದ್ರ ಜಡೇಜಾ (29) ತಮ್ಮಿಂದಾದ ಪ್ರಯತ್ನ ಮಾಡಿದರೂ, ಭಾರತದ ಸ್ಕೋರ್ 150ರ ಗಡಿ ದಾಟಲಿಲ್ಲ.
6 ಅಡಿ 5 ಇಂಚು ಎತ್ತರದ ಟೋಪ್ಲೆ ಮೊನಚಿನ ದಾಳಿಗೆ ಧವನ್ (26 ಎಸೆತಗಳಲ್ಲಿ 9) ಮತ್ತು ನಾಯಕ ರೋಹಿತ್ ಶರ್ಮಾ (9 ಎಸೆತಗಳಲ್ಲಿ 0) ಅವರ ಬಳಿ ಉತ್ತರ ಇರಲಿಲ್ಲ.