ಪುತ್ತೂರು: ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ

ಪುತ್ತೂರು, ಜು.15: ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ಇಲ್ಲಿನ ಬೈಪಾಸ್ ರಸ್ತೆಯ ಉರ್ಲಾಂಡಿ ಬಳಿ ಗುರುವಾರ ರಾತ್ರಿ ನಡೆದಿದೆ.
ಶುಂಠಿಕೊಪ್ಪದ ಚಂಗಪ್ಪ ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಶ್ರೀ ಶರವು ಗಣೇಶ್ ಆ್ಯಂಬುಲೆನ್ಸ್ ನಲ್ಲಿ ಶುಂಠಿಕೊಪ್ಪಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಆ್ಯಂಬುಲೆನ್ಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮೃತರ ಪತ್ನಿ ಲಲಿತಾ ಹಾಗೂ ಇನ್ನೋರ್ವ ಮಹಿಳೆ ಇನ್ನೊಂದು ವಾಹನದಲ್ಲಿ ಹಿಂಬಾಲಿಸುತ್ತಿದ್ದರು.
ಮಂಗಳೂರಿನಿಂದ ಆ್ಯಂಬುಲೆನ್ಸ್ ಉರ್ಲಾಂಡಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ ಬದಿಯ ಕಬ್ಬಿಣದ ತಡೆಗೋಡೆಗೆ ಢಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ರಸ್ತೆ ಬದಿ ಉರುಳಿಬಿದ್ದಿದೆ. ಬಳಿಕ ಇನ್ನೊಂದು ಆ್ಯಂಬುಲೆನ್ಸ್ ನಲ್ಲಿ ಮೃತದೇಹವನ್ನು ಶುಂಠಿಕೊಪ್ಪಕ್ಕೆ ಕೊಂಡೊಯ್ಯಲಾಯಿತು.
ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.