ದಿಲ್ಲಿ: ಚಲಿಸುತ್ತಿದ್ದ ಕಾರಿನೊಳಗೆ ಬಾಲಕಿಯ ಸಾಮೂಹಿಕ ಅತ್ಯಾಚಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಿಲ್ಲಿಯಲ್ಲಿ 16 ವರ್ಷದ ಬಾಲಕಿಯನ್ನು ಆಕೆಯ ಮನೆಯ ಸಮೀಪದಿಂದ ಅಪಹರಿಸಿದ ನಂತರ ಚಲಿಸುತ್ತಿದ್ದ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಆರೋಪಿಗಳು ದಕ್ಷಿಣ ದಿಲ್ಲಿಯ ವಸಂತ ವಿಹಾರ್ನಿಂದ ನೆರೆಯ ಉತ್ತರ ಪ್ರದೇಶದ ಗಾಝಿಯಾಬಾದ್ಗೆ ಸುಮಾರು 44 ಕಿಲೋಮೀಟರ್ಗಳವರೆಗೆ ಕಾರನ್ನು ಚಲಾಯಿಸಿದ್ದರಿಂದ ಈ ಘಟನೆ ತಕ್ಷಣ ಗಮನಕ್ಕೆ ಬಂದಿಲ್ಲ ಎಂದು ವರದಿಯಾಗಿದೆ.
ಬಾಲಕಿಯ ಮನೆಯ ಬಳಿ ತಂಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಜುಲೈ 6 ರಂದು ಸ್ನೇಹಿತೆಯ ಮನೆಯಿಂದ ಹಿಂದಿರುಗಿದ ನಂತರ ಸಂಜೆ ವಸಂತ್ ವಿಹಾರ್ ಮಾರುಕಟ್ಟೆಯಲ್ಲಿ ಇಬ್ಬರು ಆರೋಪಿಗಳನ್ನು ಭೇಟಿಯಾಗಿದ್ದೆ. ಅವರು ತನಗೆ ಪಾನೀಯವನ್ನು ಕುಡಿಸಿ ಕಾರಿನಲ್ಲಿ ಕರೆದೊಯ್ದರು ಎಂದು ಸಂತ್ರಸ್ತ 10 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ನಂತರ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಹಾಗೂ ನಗರದಾದ್ಯಂತ ಕಾರು ಓಡಿಸುತ್ತಾ ಬಾಲಕಿಗೆ ಥಳಿಸಿದ್ದಾರೆ. ಆರೋಪಿಗಳು ಅಪರಾಧ ಎಸಗಿರುವ ಬಗ್ಗೆ ವಿಡಿಯೋ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಎರಡು ದಿನಗಳ ನಂತರ ಬಾಲಕಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ತಕ್ಷಣವೇ 23, 25 ಮತ್ತು 35 ವರ್ಷ ವಯಸ್ಸಿನ ಮೂವರನ್ನು ಬಂಧಿಸಲಾಯಿತು.





