ದಿಲ್ಲಿ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಮುಹಮ್ಮದ್ ಝುಬೈರ್ ಗೆ ಜಾಮೀನು

ಹೊಸದಿಲ್ಲಿ, ಜು. 15: ವಾಸ್ತವ ಪತ್ತೆ ಪತ್ರಿಕೆ ‘ಆಲ್ಟ್ ನ್ಯೂಸ್’ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್‌ಗೆ ದಿಲ್ಲಿಯ ನ್ಯಾಯಾಲಯವೊಂದು ಶುಕ್ರವಾರ, ದಿಲ್ಲಿ ಪೊಲೀಸರು ದಾಖಲಿಸಿದ ಇನ್ನೊಂದು ಪ್ರಕರಣದಲ್ಲಿ ಜಾಮೀನು ನೀಡಿದೆ. ಆದರೆ, ಇನ್ನೆರಡು ಪ್ರಕರಣಗಳಿಗೆ ಸಂಬಂಧಿಸಿ ಅವರು ಜೈಲಿನಲ್ಲೇ ಮುಂದುವರಿಯುತ್ತಾರೆ.
ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ದೇವೇಂದ್ರ ಕುಮಾರ್ ಜಂಗಾಲ, ಝುಬೈರ್‌ಗೆ ಜಾಮೀನು ಮಂಜೂರು ಮಾಡಿದರು. ‘‘ಆರೋಗ್ಯಯುತ ಪ್ರಜಾಪ್ರಭುತ್ವಕ್ಕೆ ಭಿನ್ನ ಧ್ವನಿ ಅಗತ್ಯವಾಗಿದೆ ಹಾಗೂ ರಾಜಕೀಯ ಪಕ್ಷಗಳನ್ನು ಟೀಕಿಸಬಹುದಾಗಿದೆ ಎಂಬುದಾಗಿ ತನ್ನ ಆದೇಶದಲ್ಲಿ ನ್ಯಾಯಾಧೀಶರು ಹೇಳಿದ್ದಾರೆ.
‘‘ಜನರು ಹೊರಬಂದು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳದಿದ್ದರೆ ಪ್ರಜಾಪ್ರಭುತ್ವವು ಕೆಲಸ ಮಾಡುವುದಿಲ್ಲ ಹಾಗೂ ಅದು ಅಭಿವೃದ್ಧಿಹೊಂದುವುದೂ ಇಲ್ಲ’’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಝುಬೇರ್ ವಿರುದ್ಧ ಈಗ ಏಳು ಪ್ರಕರಣಗಳಿವೆ. ಎರಡು ಪ್ರಕರಣಗಳಲ್ಲಿ ಜಾಮೀನು ಲಭಿಸಿವೆ.
2018ರಲ್ಲಿ ಮಾಡಿದ ಟ್ವೀಟ್‌ಗೆ ಸಂಬಂದಿಸಿ ದಿಲ್ಲಿ ಪೊಲೀಸರು ಝುಬೈರ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಆ ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಉತ್ತರಪ್ರದೇಶದಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿ ಅವರು ಜೈಲಿನಲ್ಲೇ ಮುಂದುವರಿಯಲಿದ್ದಾರೆ.
ಉತ್ತರಪ್ರದೇಶ ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ಆರು ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಮುಹಮ್ಮದ್ ಝುಬೈರ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ತನ್ನ ವಿರುದ್ಧದ ಮೊಕದ್ದಮೆಗಳ ವಿಚಾರಣೆ ನಡೆಸಲು ಉತ್ತರ ಪ್ರದೇಶ ಸ್ಥಾಪಿಸಿರುವ ವಿಶೇಷ ತನಿಖಾ ತಂಡವನ್ನು ರದ್ದುಗೊಳಿಸುವಂತೆಯೂ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.
ನಾಲ್ಕು ವರ್ಷಗಳ ಹಿಂದೆ ಪ್ರಸಿದ್ಧ ಹಿಂದಿ ಚಿತ್ರವೊಂದರ ಸ್ಕ್ರೀನ್‌ಶಾಟೊಂದನ್ನು ಟ್ವೀಟ್ ಮಾಡಿರುವುದಕ್ಕಾಗಿ ದಿಲ್ಲಿ ಪೊಲೀಸರು ಮುಹಮ್ಮದ್ ಝುಬೈರ್‌ರನ್ನು ಜೂನ್ 27ರಂದು ಬಂಧಿಸಿದ್ದರು.
ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಆಡಿರುವ ಪ್ರಚೋದನಾತ್ಮಕ ಮಾತುಗಳನ್ನು ಒಳಗೊಂಡ ವೀಡಿಯೊವೊಂದನ್ನು ಝಬೈರ್ ಬಹಿರಂಗಪಡಿಸಿದ್ದರು. ಆ ವೀಡಿಯೊ ದೇಶ ವಿದೇಶಗಳಲ್ಲಿ ಕೋಲಾಹಲವೆಬ್ಬಿಸಿತು. ಅಂತಿಮವಾಗಿ, ಬಿಜೆಪಿಗೆ ತನ್ನ ವಕ್ತಾರೆ ನೂಪುರ್ ಶರ್ಮರನ್ನು ಅಮಾನತುಗೊಳಿಸಿ ಮೊಕದ್ದಮೆ ದಾಖಲಿಸುವುದು ಅನಿವಾರ್ಯವಾಯಿತು.
ಇದಾದ ದಿನಗಳ ಬಳಿಕ ಝುಬೈರ್‌ರನ್ನು ನಾಲ್ಕು ವರ್ಷಗಳ ಹಿಂದಿನ ಟ್ವೀಟ್‌ಗೆ ಸಂಬಂಧಿಸಿ ಬಂಧಿಸಲಾಯಿತು.







