ಇನ್ನು ಮುಂದೆ ಅನುಮತಿ ಇಲ್ಲದೆ ರಾಜ್ಯದ ಸರ್ಕಾರಿ ಕಚೇರಿಗಳ ವೀಡಿಯೊ, ಫೋಟೊ ತೆಗೆಯುವಂತಿಲ್ಲ: ಆದೇಶ

ಬೆಂಗಳೂರು, ಜು. 15: ‘ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅನುಮತಿ ಇಲ್ಲದೆ ಫೊಟೊ ತೆಗೆಯುವುದು ಮತ್ತು ವಿಡಿಯೋ ಚಿತ್ರೀಕರಿಸುವುದನ್ನು ನಿಷೇಧಿಸಿ' ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಆದೇಶ ಹೊರಡಿಸಲಾಗಿದೆ. ‘ಸಾರ್ವಜನಿಕರು ಸರಕಾರಿ ಕಚೇರಿಗಳನ್ನು ಪ್ರವೇಶಿಸಿ ಅನಧಿಕೃತವಾಗಿ ಫೋಟೊ, ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸರಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ತೊಂದರೆ ಆಗುತ್ತಿದೆ. ಅಲ್ಲದೆ, ಅಂತಹ ಫೋಟೋ ಮತ್ತು ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಇಲಾಖೆ, ಸರಕಾರದ ಘನತೆಗೆ ಕುಂದುಂಟಾಗುತ್ತಿದೆ.
ಮಾತ್ರವಲ್ಲ, ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ ಸರಕಾರಿ ಕಚೇರಿಗಳಲ್ಲಿ ಅನಧಿಕೃತವಾಗಿ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧ ಮಾಡಬೇಕು ಎಂದು ಕೋರಿ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮನವಿ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಸರಕಾರಿ ನೌಕರರ ಸಂಘದ ಮನವಿಯನ್ನು ಆಧರಿಸಿ ಆದೇಶ ಹೊರಡಿಸಲಾಗಿದೆ.








