"ಮಕ್ಕಳು 7 ಏಳು ಗಂಟೆಗೆ ಎದ್ದು ಶಾಲೆಗೆ ಹೋಗುತ್ತಾರೆಂದಾದರೆ...": ಒಂದುಗಂಟೆ ಮುಂಚೆಯೇ ಸುಪ್ರೀಂಕೋರ್ಟ್ ಕಾರ್ಯಾರಂಭ

ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಕಲಾಪಗಳು ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳಬೇಕು ಎಂದು ದೇಶದ ಅತ್ಯುನ್ನತ ನ್ಯಾಯಾಲಯದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿರುವ ಜಸ್ಟಿಸ್ ಯು.ಯು ಲಲಿತ್ ಅವರು ಇಂದು ಹೇಳಿದರು. ಪ್ರಕರಣವೊಂದರ ವಿಚರಣೆಯನ್ನು ಎಂದಿನಂತೆ 10.30ರ ಬದಲು ಬೆಳಿಗ್ಗೆ 9.30ಕ್ಕೆ ಜಸ್ಟಿಸ್ ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ ಆರಂಭಿಸಿದ ಬಳಿಕ ಅವರು ಮೇಲಿನಂತೆ ಹೇಳಿದರು.
"ಮಕ್ಕಳು ಶಾಲೆಗೆ ಬೆಳಿಗ್ಗೆ 7 ಗಂಟೆಗೆ ಹೋಗಬಹುದಾದರೆ ನ್ಯಾಯಾಧೀಶರು ಮತ್ತು ವಕೀಲರು ಏಕೆ ತಮ್ಮ ಕೆಲಸವನ್ನು 9 ಗಂಟೆಗೆ ಆರಂಭಿಸಬಾರದು?" ಎಂದು ಅವರು ಹೇಳಿದರು. ಕಲಾಪ ಬೇಗನೇ ಆರಂಭಗೊಂಡಿರುವುದಕ್ಕೆ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಖುಷಿ ವ್ಯಕ್ತಪಡಿಸಿದ ನಂತರ ಜಸ್ಟಿಸ್ ಲಲಿತ್ ಮೇಲಿನಂತೆ ಹೇಳಿದರು.
ಇಂದು ಪ್ರಕರಣವೊಂದರ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠದಲ್ಲಿ ಜಸ್ಟಿಸ್ ಲಲಿತ್ ಹೊರತಾಗಿ ಜಸ್ಟಿಸ್ ಎಸ್. ರವೀಂದ್ರ ಭಟ್ ಮತ್ತು ಜಸ್ಟಿಸ್ ಸುಧಾಂಶು ಧುಲಿಯಾ ಇದ್ದರು.
"9.30ಕ್ಕೆ ಕೋರ್ಟ್ ಕಲಾಪ ಆರಂಭಿಸುವುದು ಅತ್ಯಂತ ಸೂಕ್ತ" ಎಂದು ರೋಹಟ್ಗಿ ಹೇಳಿದಾಗ ಪ್ರತಿಕ್ರಿಯಿಸಿದ ಜಸ್ಟಿಸ್ ಲಲಿತ್, ನ್ಯಾಯಾಲಯ ಬೇಗನೇ ಆರಂಭಗೊಳ್ಳಬೇಕು ಎಂದು ತಾವು ಯಾವತ್ತೂ ನಂಬಿರುವುದಾಗಿ ಹೇಳಿದರು.
ದೀರ್ಘ ವಿಚಾರಣೆಗಳು ಇಲ್ಲದೇ ಇದ್ದಾಗ ಸುಪ್ರೀಂ ಕೋರ್ಟ್ 9 ಗಂಟೆಗೆ ಕಲಾಪ ಆರಂಭಿಸಿ 11.30ಕ್ಕೆ ಅರ್ಧ ಗಂಟೆ ವಿರಾಮ ತೆಗೆದುಗೊಳ್ಳಬಹುದು ನಂತರ 2 ಗಂಟೆ ತನಕ ಕಲಾಪ ನಡೆಸಿದರೆ ಸಂಜೆ ಹೊತ್ತು ಹೆಚ್ಚು ಕೆಲಸ ಮಾಡಲು ಸಮಯ ದೊರೆಯುತ್ತದೆ ಎಂದು ಅವರು ಹೇಳಿದರು.
ಈಗಿನ ಪದ್ಧತಿಯಂತೆ ಸೋಮವಾರದಿಂದ ಶುಕ್ರವಾರದವರೆಗೆ ಕಲಾಪಗಳು 10.30ಕ್ಕೆ ಆರಂಭಗೊಂಡು 4 ಗಂಟೆಗೆ ಮುಗಿಯುತ್ತದೆ. ಅಪರಾಹ್ನ 1 ರಿಂದ 2ರ ತನಕ ಊಟದ ವಿರಾಮವಿರುತ್ತದೆ. ಜಸ್ಟಿಸ್ ಯು ಯು ಲಲಿತ್ ಅವರು ಆಗಸ್ಟ್ 27 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದು ಅವರ ಅವಧಿ ನವೆಂಬರ್ 8ಕ್ಕೆ ಕೊನೆಗೊಳ್ಳಲಿದೆ.







