ಸರಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಉಡುಪಿ ಜಿಲ್ಲಾ ನ್ಯಾಯಾಧೀಶರ ಭೇಟಿ

ಉಡುಪಿ : ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಶಾಂತಾವೀರ ಶಿವಪ್ಪ ಅವರು ಶುಕ್ರವಾರ, ಹಿರಿಯ ಸಿವಿಲ್ ನ್ಯಾಯಾಧೀಶೆ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಅವರೊಂದಿಗೆ ನಗರದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಮಧುಸೂದನ್ ನಾಯಕ್, ಈ ಆಸ್ಪತ್ರೆಯ ನಿರ್ವಹಣೆ, ನೀಡುವ ವಿವಿಧ ಸೇವೆಗಳು ಮತ್ತು ರೋಗಿಗಳ ಆರೈಕೆಗಳ ಕುರಿತಂತೆ ನ್ಯಾಯಾಧೀಶರಿಗೆ ವಿವರಿಸಿದರು. ಇತ್ತೀಚೆಗೆ ಖಾಸಗಿಯವರಿಂದ ಸರಕಾರಕ್ಕೆ ಹಸ್ತಾಂತರಗೊಂಡಿರುವ ಈ ಆಸ್ಪತ್ರೆಗೆ ಇನ್ನೂ ಹೆಚ್ಚಿನ ಸಿಬ್ಬಂದಿಗಳ ನೇಮಕಾತಿಯ ಬಳಿಕ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಡಾ.ನಾಯಕ್, ನೇಮಕ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದು ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.
ಆಸ್ಪತ್ರೆ ಆವರಣ, ಒಳರೋಗಿ, ಹೊರ ರೋಗಿ ವಿಭಾಗ, ವಾರ್ಡ್‌ಗಳು, ಔಷಧಾಲಯ, ಪ್ರಯೋಗಾಲಯ, ಶಸ್ತ್ರಚಿಕಿತ್ಸಾ ಕೊಠಡಿ, ಐಸಿಯು, ಕುಡಿವ ನೀರು ಹಾಗೂ ಶೌಚಾಲಯಗಳ ನಿರ್ವಹಣೆ, ಆಸ್ಪತ್ರೆಯ ಶುಚಿತ್ವ ಸಹಿತ ವಿವಿಧ ಮೂಲ ಸೌಕರ್ಯಗಳ ಬಗ್ಗೆ ನ್ಯಾಯಧೀಶರುಗಳು ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶ ಶಾಂತಾವೀ ಶಿವಪ್ಪ, ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಆಸ್ಪತ್ರೆ ಎಂದರೆ ಹೇಗಿರಬೇಕು ಎಂಬುದಕ್ಕೆ ಈ ಆಸ್ಪತ್ರೆ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದರು.
ಸಿಬ್ಬಂದಿಗಳ ಕೊರತೆ ಮಾತ್ರ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಖಾಲಿ ಇರುವ ೧೦೫ ಸಿಬ್ಬಂದಿಗಳ ನೇಮಕ ಮಾಡುವ ಬಗ್ಗೆ ಸರಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಆಸ್ಪತ್ರೆಯ ಕಾರ್ಯ ನಿರ್ವಹಣೆ, ಆರೋಗ್ಯ ಸೌಕರ್ಯಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಶುಚಿತ್ವದ ಸಿಬ್ಬಂದಿಗಳ ಕಾರ್ಯಕ್ಕೆ ಅವರು ಮೆಚ್ಚುಗೆ ಸೂಚಿಸಿದರು.
ಈ ಆಸ್ಪತ್ರೆಯ ಕುರಿತಂತೆ ಸಂಪೂರ್ಣ ವರದಿಯನ್ನು ತಾವು ರಾಜ್ಯ ಪ್ರಾಧಿಕಾರಕ್ಕೆ ಸಲ್ಲಿಸುವುದಾಗಿ ನ್ಯಾಯಧೀಶರು ತಿಳಿಸಿದರು. ಆಸ್ಪತ್ರೆ ವೈದ್ಯರಾದ ಡಾ.ಸಂದೀಪ್ ಎ.ಎಸ್, ಡಾ.ವೇಣುಗೋಪಾಲ್, ಡಾ.ಅಮರ್‌ನಾಥ್, ಡಾ. ಸೂರ್ಯನಾರಾಯಣ, ಡಾ. ರಾಜಗೋಪಾಲ ಭಂಡಾರಿ ಉಪಸ್ಥಿತರಿದ್ದರು.