ತಗ್ಗಿದ ಮಳೆಯ ಪ್ರಮಾಣ; ಮುಂದುವರಿದ ಹಾನಿ ಪ್ರಕರಣ

ಉಡುಪಿ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸಾಕಷ್ಟು ತಗ್ಗಿದರೂ, ಗಾಳಿ-ಮಳೆಯಿಂದ ಆಗುವ ಹಾನಿಯ ಪ್ರಕರಣಗಳು ಮುಂದುವರಿದಿವೆ. ಬೈಂದೂರು, ಹೆಬ್ರಿ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಈಗ ನೆರೆಯ ಭೀತಿ ದೂರವಾಗಿದೆ. ಆದರೆ ಆಗಾಗ ಬಲವಾದ ಗಾಳಿಯೊಂದಿಗೆ ಸುರಿಯುವ ಮಳೆಯಿಂದ ಅಲ್ಲಲ್ಲಿ ಹಾನಿಗಳು ವರದಿಯಾಗುತ್ತಿವೆ.
ಶುಕ್ರವಾರ ಸಂಜೆಯ ಬಳಿಕ ಬೈಂದೂರು, ಕುಂದಾಪುರ, ಬ್ರಹ್ಮಾವರ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಮಳೆಯೊಂದಿಗೆ ಆಗಾಗ ಜೋರಾದ ಗಾಳಿಯೂ ಬೀಸುತಿದ್ದು, ರಾತ್ರಿಯಿಡೀ ಮಳೆ ಸುರಿದರೆ ನೆರೆಯ ಸಾಧ್ಯತೆ ಕಂಡುಬರುವ ಬಗ್ಗೆ ಜನ ಆತಂಕಿತರಾಗಿದ್ದಾರೆ.
ಗುರುವಾರ ಅಪರಾಹ್ನ ಬೀಸಿದ ಭಾರೀ ಗಾಳಿಗೆ ಕಾರ್ಕಳ ತಾಲೂಕು ಬೆಳ್ಮಣ್‌ನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಮೇಲ್ಚಾವಣಿ ಸಂಪೂರ್ಣ ಧರಾಶಾಹಿಯಾಗಿದ್ದು ಲಕ್ಷಾಂತರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಳೆದ ಎರಡು ದಿನಗಳಲ್ಲಿ ಜಿಲ್ಲೆಯಿಂದ ೩೪ ಹಾನಿಯ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸುಮಾರು ೨೭ ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕಿನಿಂದ ೧೩ ಪ್ರಕರಣಗಳು ವರದಿಯಾ ಗಿದ್ದು ಐದು ಲಕ್ಷ ರೂ., ಬೈಂದೂರಿನ ಮೂರು ಪ್ರಕರಣಗಳಿಂದ ೩.೮೦ ಲಕ್ಷ ರೂ., ಬ್ರಹ್ಮಾವರ ತಾಲೂಕಿನ ೭ ಪ್ರಕರಣಗಳಿಂದ ೨.೮೬ ಲಕ್ಷ ರೂ., ಉಡುಪಿಯ ಐದು ಪ್ರಕರಣಗಳಿಂದ ೨.೧೫ ಲಕ್ಷ ರೂ.,ಕಾರ್ಕಳದ ನಾಲ್ಕು ಪ್ರಕರಣಗಳಿಂದ ೧.೬೦ ಲಕ್ಷ ರೂ., ಹೆಬ್ರಿಯ ಒಂದು ಪ್ರಕರಣದಿಂದ ಒಂದು ಲಕ್ಷ ರೂ. ಹಾಗೂ ಕಾಪುವಿನಲ್ಲಿ ಹಾನಿಯಿಂದಾದ ನಷ್ಟದ ವರದಿಗಳು ಜಿಲ್ಲಾಧಿಕಾರಿಗಳ ನಿಯಂತ್ರಣ ಕಚೇರಿಗೆ ಬಂದಿವೆ.
ಬೈಂದೂರಿನ ನಾಡ ಗ್ರಾಮದಲ್ಲಿ ಜಗದೀಶ್ ಎಂಬವರ ವಾಸ್ತವ್ಯದ ಪಕ್ಕಾ ಮನೆ ಮಳೆಯಿಂದ ಸಂಪೂರ್ಣ ಹಾನಿಗೊಂಡಿದ್ದು ಎರಡು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಬೈಂದೂರಿನ ಅಕ್ಕಮ್ಮ ಪೂಜಾರಿ ಮನೆ ಮೇಲೆ ಮರಬಿದ್ದು ಒಂದು ಲಕ್ಷರೂ. ಹಾಗೂ ಪಡುವರಿ ಗ್ರಾಮದ ವೆಂಕಟರಮಣ ಎಂಬವರ ಮನೆಗೆ 80 ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳದ ನೀರೆಯಲ್ಲಿ ಮೋವಿನ್ ಎಂಬವರ ಮನೆಗೆ ಒಂದು ಲಕ್ಷ ರೂ. ಹಾಗೂ ಕಸಬಾದ ವಿಜಯ ಎಂಬವರ ಮನೆ ಮೇಲೆ ಮರಬಿದ್ದು ೩೦ಸಾವಿರ, ಉಡುಪಿ ತಾಲೂಕಿನ ಉದ್ಯಾವರದ ರಮೇಶ್ ಆಚಾರ್ಯ ಹಾಗೂ ೮೦ಬಡಗುಬೆಟ್ಟಿನ ಸುರೇಖಾ ನಾಯಕ್‌ರ ಮನೆಗೆ ಒಟ್ಟು ೫೦ ಸಾವಿರ ರೂ.ಗಳಷ್ಟು ಹಾನಿಯಾಗಿದೆ.
ಬ್ರಹ್ಮಾವರದ ಪಾರಂಪಳ್ಳಿ ಗ್ರಾಮದ ಚಿಕ್ಕು ಪೂಜಾರ್ತಿ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು ೫೦ಸಾವಿರ ರೂ, ಚೇರ್ಕಾಡಿ ಗ್ರಾಮದ ಅನಿಲ್‌ಕುಮಾರ್ ಎಂಬವರ ಮನೆಯ ಗೋಡೆ ಸಂಪೂರ್ಣ ಕುಸಿದು ಒಂದೂವರೆ ಲಕ್ಷ ರೂ., ಹೆಬ್ರಿ ಬೆಳಂಜೆಯ ರಾಧ ಪೂಜಾರ್ತಿಯವರ ಮನೆ ಹಾಗೂ ಉಡುಪಿ ಪುತ್ತೂರು ಗ್ರಾಮದ ಜಯಂತಿ ಪ್ರಭು ಮನೆಗೆ ತಲಾ ಒಂದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ನೆರೆಯಿಂದ ಜಾನುವಾರು ಸಾವು: ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ವನಜ ಎಂಬವರಿಗೆ ಸೇರಿದ ಜಾನುವಾರು ನೆರೆಯಲ್ಲಿ ಕೊಚ್ಚಿ ಹೋಗಿದ್ದು, ಅದರ ಶವ ಕೊಡ್ಲಿ ಪ್ರದೇಶದ ತೋಡಿನಲ್ಲಿ ಪತ್ತೆಯಾಗಿದೆ. ಇದರಿಂದ ೪೦,೦೦೦ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕಿನ ವಂಡ್ಸೆ, ಕೊರ್ಗಿ, ಬೀಜಾಡಿ, ಸಿದ್ಧಾಪುರ, ಹರ್ಕೂರು (೩)ಗಳಲ್ಲಿ ಒಟ್ಟು ಎಂಟು ಮನೆಗಳ ಜಾನುವಾರು ಕೊಟ್ಟಿಗೆಗಳಿಗೆ ಭಾಗಶ: ಹಾನಿಯಾಗಿದ್ದು, ೩.೫೦ಲಕ್ಷ ರೂ.ಗಳಿಗೂ ಅಧಿಕ ಹಾನಿಯಾಗಿರುವ ವರದಿಗಳು ಬಂದಿವೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಶನಿವಾರವೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ೧೧.೫ರಿಂದ ೧೦.೪ಸೆ.ಮಿ. ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರಿನ ಪ್ರಾದೇಶಿಕ ಕೇಂದ್ರ ಮುನ್ಸೂಚನೆ ನೀಡಿದೆ.
ಈ ಅವಧಿಯಲ್ಲಿ ಗಂಟೆಗೆ ೪೦ರಿಂದ ೫೦ಕಿ.ಮೀ. ವೇಗದ ಗಾಳಿ ಹಾಗೂ ೩.೫ರಿಂದ ೪.೬ಮೀ. ಎತ್ತರದ ಅಲೆಗಳು ಕರಾವಳಿ ತೀರವನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ಜು.೧೭ರಿಂದ ನಾಲ್ಕು ದಿನಗಳವರೆಗೆ (ಜು.೨೦) ಯಲ್ಲೋ ಅಲರ್ಟ್ ಇದ್ದು, ಈ ಅವಧಿಯಲ್ಲಿ ೬೪.೫ಮಿ.ಮೀ.ನಿಂದ ೧೧೫.೫ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇರುತ್ತದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.







