ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರೆಟಿಕುಲೇಟೆಡ್ ಹೆಬ್ಬಾವುಗಳ ಜನನ

ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಎರಡು ರೆಟಿಕುಲೇಟೆಡ್ ಹೆಬ್ಬಾವುಗಳು ಒಟ್ಟು 50 ಮೊಟ್ಟೆಯಿಟ್ಟು ಎರಡು ತಿಂಗಳುಗಳಿಂದ ಕಾವು ನೀಡುತ್ತಿವೆ.
ಈಗ ಮೊಟ್ಟೆ ಒಡೆದು ಮರಿಗಳು ಹೊರಬರಲು ಪ್ರಾರಂಭಿಸಿವೆ. 40ರಿಂದ 45 ಮರಿಗಳನ್ನು ನಿರೀಕ್ಷಿಸಲಾಗಿದೆ. ಹಿಂದೆ ರೆಟಿಕುಲೇಟೆಡ್ ಹೆಬ್ಬಾವುಗಳು ಎರಡು ಬಾರಿ 10 ಹಾಗೂ 25 ಮೊಟ್ಟೆಗಳನ್ನು ಮರಿ ಮಾಡಿದ್ದು, ಅವುಗಳಲ್ಲಿ 10 ಮರಿಗಳನ್ನು ಪ್ರಾಣಿವಿನಿಮಯ ಯೋಜನೆಯಲ್ಲಿ ಇತರೆ ಮೃಗಾಲಯಗಳಿಗೆ ನೀಡಲಾಗಿದೆ.
ಐದು ವರ್ಷಗಳ ಹಿಂದೆ ಚೆನ್ನೈ ಮೃಗಾಲಯದಿಂದ 5 ರೆಟಿಕುಲೇಟೆಡ್ ಹೆಬ್ಬಾವುಗಳನ್ನು ಪಿಲಿಕುಳಕ್ಕೆ ತರಿಸಿಕೊಳ್ಳಲಾಗಿತ್ತು. ರೆಟಿಕುಲೇಟೆಡ್ ಹೆಬ್ಬಾವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ, ಅಂಡಮಾನ್ ನಿಕೊಬಾರ್ ದ್ವೀಪಗಳಲ್ಲಿ ಕಂಡುಬರುತ್ತದೆ. ಇವು ವಿಷರಹಿತ ಹಾವುಗಳಲ್ಲಿಯೇ ಅತ್ಯಂತ ಉದ್ದವಾದಿರುತ್ತವೆ, ಈ ಹೆಬ್ಬಾವು ಸುಮಾರು 3 ಅಡಿ ಉದ್ದ ಬೆಳೆಯ ಬಲ್ಲದು ಹಾಗೂ ಆಕ್ರಮಣಕಾರಿ ಪ್ರವೃತ್ತಿ ಹೊಂದಿರುತ್ತವೆ.
ಇದೇ ವೇಳೆ ಮೃಗಾಲಯದಲ್ಲಿ ವಿಷಕಾರಿಯಾದ ಕನ್ನಡಿಹಾವು 16 ಮರಿಗಳನ್ನು ಇಟ್ಟಿದೆ. ಈಗಾಗಲೇ ಹಲವು ಜಾತಿಯ ಉರಗಗಳು,ಮಲಬಾರ್ ಗುಳಿಮಂಡಲ, ಗೂನು ಮೂಗಿನ ಗುಳಿಮಂಡಲ/ ಸೊಪ್ಪು ಕನ್ನಡಿಹಾವು, ಕಟ್ಟು ಹಾವು, ನಾಗರಹಾವು, ಇರ್ತಲೆ ಹಾವು, ಹುಲ್ಲು ಹಾವು, ತೋಳ ಹಾವು, ಚೌಕಳಿ ನೀರು ಹಾವು, ಮಗ್ಗರ್ ಮೊಸಳೆಗಳ ಮರಿಗಳು ಪಿಲಿಕುಳದಲ್ಲಿ ಜನಿಸಿದ್ದು, ಕೆಲವನ್ನು ಪ್ರಾಣಿವಿನಿಮಯ ಯೋಜನೆಗೆ ಬಳಸಲಾಗಿದ್ದು, ಹೆಚ್ಚುವರಿ ನಿರುಪದ್ರವಿ ಪ್ರಾಣಿಗಳನ್ನು ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
.jpg)