ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ: ಆರೋಪಿ ಸಿನೆಮಾ ನಟನ ಬಂಧನ

ವೀರೇಂದ್ರಬಾಬು - ಬಂಧಿತ ಆರೋಪಿ
ಬೆಂಗಳೂರು, ಜು.15: ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಆರೋಪದಡಿ ಕನ್ನಡ ಚಿತ್ರರಂಗದ ನಟನನ್ನು ಇಲ್ಲಿನ ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
2011ರಲ್ಲಿ ತೆರೆಕಂಡಿದ್ದ ಸ್ವಯಂಕೃಷಿ ಸಿನೆಮಾ ನಟ ವೀರೇಂದ್ರಬಾಬು ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಧಾರವಾಡ ಮೂಲದ ಬಸವರಾಜ್ ಘೋಷಾಲ್ ಎಂಬುವರಿಗೆ 1.88 ಕೋಟಿ ರೂಪಾಯಿ ವಂಚನೆ ಸಂಬಂಧ ನೀಡಿದ ದೂರಿನ ಮೇರೆಗೆ ವೀರೇಂದ್ರ ಬಾಬುನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರ ಜನಹಿತ ಪಕ್ಷ ಹಾಗೂ ಕರ್ನಾಟಕ ರಕ್ಷಣಾ ಪಡೆ ಎಂಬ ಸಂಘಟನೆಯನ್ನೂ ಸ್ಥಾಪಿಸಿದ್ದ ಈತ, ಸಂಘಟನೆಯಲ್ಲಿ ಸದಸ್ಯ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ. ಜೊತೆಗೆ ಶಾಸಕ ಸ್ಥಾನಗಳಿಗೆ ವಿವಿಧ ಪಕ್ಷಗಳಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡುತ್ತಿದ್ದ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.





